ಮತ್ತೆ ಬಾಗಿಲು ತೆರೆದ ಅಮೆರಿಕಾ; ಭೇಟಿಗೆ ವಿಶ್ವಾದ್ಯಂತ ಪ್ರಯಾಣಿಕರ ತಯಾರಿ

ಪ್ಯಾರಿಸ್: ಸುಮಾರು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಾದಲ್ಲಿನ ಪ್ರೀತಿಪಾತ್ರರ ಭೇಟಿಗೆ ಪ್ರಪಂಚದಾದ್ಯಂತದ ಪ್ರಯಾಣಿಕರು ಸಿದ್ಧರಾಗಿದ್ದಾರೆ. ಅಮೆರಿಕೆಯವರಲ್ಲದ ನಾಗರಿಕರ ಭೇಟಿಗೆ ಇದ್ದ ನಿರ್ಬಂಧಗಳನ್ನು ಅಮರಿಕ ಈಗ ತೆಗೆದುಹಾಕಿದ್ದು, ಲಸಿಕೆ ಪಡೆದುಕೊಂಡವರು ಅಮೆರಿಕಾಕ್ಕೆ ಹಾರಬಹುದಾಗಿದೆ.
ಕೋವಿಡ್ ಹರಡುವಿಕೆ ಪರಿಹರಿಸಲು 2020ರ ಆರಂಭದಲ್ಲಿ ಅಮೆರಿಕಾ ಅತಿ ಕಠಿಣ ಪ್ರಯಾಣ ನಿರ್ಬಂಧಗಳನ್ನು ವಿಧಿಸಿತ್ತು. ಬ್ರಿಟನ್, ಗಡಿ ನಿಯಂತ್ರಣಗಳಿಲ್ಲದ ಯುರೋಪಿನ 26 ಷೆಂಗೆನ್ ದೇಶಗಳು, ಐರ್ಲೆಂಡ್ , ಚೀನಾ, ಭಾರತ, ದಕ್ಷಿಣ ಆಫ್ರಿಕಾ, ಇರಾನ್ ಮತ್ತು ಬ್ರೆಜಿಲ್ಗಳಲ್ಲಿದ್ದ ಅಮೆರಿಕೆಯವರಲ್ಲದ ನಾಗರಿಕರಿಗೆ ನಿರ್ಬಂಧ ಹೇರಲಾಗಿತ್ತು.
ಈ ನಿರ್ಬಂಧವು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವನ್ನು ನೀಡಿದ್ದು ಮಾತ್ರವಲ್ಲದೆ, ಅಲ್ಲಿದ್ದ ವಿದೇಶೀಯರನ್ನು ಸ್ನೇಹಿತರು ಮತ್ತು ಕುಟುಂಬಗಳನ್ನು ಮದುವೆ, ಅಂತ್ಯಕ್ರಿಯೆ ಅಥವಾ ಹೊಸ ಮಕ್ಕಳ ಜನನ ಸಂದರ್ಭದಲ್ಲೂ ಭೇಟಿಯಾಗದಂತೆ ಮಾಡಿತ್ತು.
ಆದರೆ ಸೋಮವಾರದಿಂದ, ವ್ಯಾಕ್ಸಿನೇಷನ್ನ ಅಧಿಕೃತ ಪುರಾವೆ ಮತ್ತು ಇತ್ತೀಚಿನ ಕೋವಿಡ್ ನೆಗೆಟಿವ್ ವರದಿ ತೋರಿಸುವ ಪ್ರಯಾಣಿಕರು ಅಮೆರಿಕಾಕ್ಕೆ ತೆರಳಬಹುದಾಗಿದ್ದು, ಲಂಡನ್, ಪ್ಯಾರಿಸ್ ಮತ್ತಿತರ ದೇಶಗಳ ಪ್ರಯಾಣಿಕರು ತೆರಳಲು ಸಜ್ಜಾಗಿದ್ದಾರೆ.
