
ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಅಧಿಕೃತ ಇಮೇಲ್ ಗಳ ಫೂಟರ್ ನಲ್ಲಿ ಅಪ್ಲೋಡ್ ಮಾಡಿದ್ದ ಪ್ರಧಾನಿ ಮೋದಿ ಚಿತ್ರ ಹಾಗೂ ʼಸಬ್ ಕಾ ಸಾತ್.. ಸಬ್ ಕಾ ವಿಕಾಸ್ʼ ಎನ್ನುವ ಘೋಷಣೆ ಹಾಕಿದ್ದನ್ನು ತಕ್ಷಣ ತೆರವು ಮಾಡುವಂತೆ ಸುಪ್ರೀಂ ಕೋರ್ಟ್, ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ ಗೆ ಆದೇಶ ನೀಡಿದೆ.
ಕೋರ್ಟ್ ನ ಗಮನಕ್ಕೆ ತಾರದೇ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಾಗೂ ಘೋಷಣೆಯನ್ನು ಇ-ಮೇಲ್ ನ ಫೂಟರ್ ನಲ್ಲಿ ಬರುವಂತೆ ಸೇರಿಸಲಾಗಿತ್ತು. ನ್ಯಾಯಾಲಯಕ್ಕೆ ಸಂಬಂಧಿತವಲ್ಲದ್ದನ್ನು ಅಪ್ಲೋಡ್ ಮಾಡಿರುವುದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗಮನಿಸಿದ್ದು, ಕೂಡಲೇ ತೆಗೆದುಹಾಕುವಂತೆ ಎನ್ಐಸಿಗೆ ಸೂಚನೆ ನೀಡಲಾಗಿದೆ.
ಫೂಟರ್ ನಲ್ಲಿ ಸರ್ವೋಚ್ಛ ನ್ಯಾಯಾಲಯದ ಚಿತ್ರವನ್ನು ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತೆಗೆದು ಸುಪ್ರೀಂ ಕೋರ್ಟ್ನ ಚಿತ್ರವನ್ನು ಅಳವಡಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.



