ಆಧುನಿಕ ದನದ ಕೊಟ್ಟಿಗೆಯನ್ನು ಆವಿಷ್ಕಾರಗೊಳಿಸಿದ ಕನಕಪುರದ ವಿದ್ಯಾರ್ಥಿಗೆ ರಾಷ್ಟ್ರಪ್ರಶಸ್ತಿ ಗರಿ

ರಾಮನಗರ: ಕನಕಪುರ ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಅಭಿವೃದ್ಧಿಪಡಿಸಿರುವ ”ಆಧುನಿಕ ದನದ ಕೊಟ್ಟಿಗೆ” ಪ್ರಾಜೆಕ್ಟ್‌ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕನಕಪುರ ತಾಲ್ಲೂಕು ಮರಳವಾಡಿ ಹೋಬಳಿ ಕಲ್ಲನಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ, ಪ್ರಸ್ತುತ ಎಕ್ಸ್ ಮುನಿಷಿಪಲ್ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದೇವೇಗೌಡ ಹೈನುಗಾರಿಕೆ ರೈತರಿಗೆ ಉಪಯುಕ್ತವಾಗುವಂತ ಆಧುನಿಕ ದನದ ಕೊಟ್ಟಿಗೆಯನ್ನು ಆವಿಷ್ಕಾರಗೊಳಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ವಿದ್ಯಾರ್ಥಿಯಾಗಿದ್ದಾನೆ.
ಗ್ರಾಮೀಣ ಭಾಗದ ರೈತರು ಕಾಡು ಪ್ರಾಣಿಗಳಿಂದ ಎದುರಿಸುತ್ತಿದ್ದ ಸಮಸ್ಯೆ ಮತ್ತು ಬೆಂಕಿ ಅವಘಡ, ರಾಸುಗಳ ಕಳ್ಳತನ, ಅವಮಾನ ವೈಪರೀತ್ಯ ಮೊದಲಾದ ತೊಂದರೆಗಳಿಂದ ಹಸುಗಳನ್ನು ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಕಡಿಮೆ ವೆಚ್ಚದಲ್ಲಿ ರೈತ ಸ್ನೇಹಿಯಾಗಿ ದನದ ಕೊಟ್ಟಿಗೆ ನಿರ್ಮಾಣ ಮಾಡಬಹುದು ಎಂಬುದನ್ನು ತನ್ನ ಪ್ರೋಜೆಕ್ಟ ಮೂಲಕ ತೋರಿಸಿದ್ದಾನೆ. ಪ್ರತಿವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ವಿಜ್ಞಾನ ಮತ್ತು ವೈಜ್ಞಾನಿಕ ಆವಿಷ್ಕಾರ ಮೇಳದಲ್ಲಿ 2019-20 ನೇ ಸಾಲಿನಲ್ಲಿ ದೇವೇಗೌಡ ತಾನು ಮಾಡಿರುವ ಆಧುನಿಕ ದನದ ಕೊಟ್ಟಿಗೆಯನ್ನು ಜಿಲ್ಲಾ ಮಟ್ಟಕ್ಕೆ ಕಳಿಸಿಕೊಟ್ಟಿದ್ದ. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಸುಮಾರು 550 ಪ್ರಾಜೆಕ್ಟಗಳು ಆಯ್ಕೆಯಾಗಿದ್ದವು.
ಅದರಲ್ಲಿ ದೇವೇಗೌಡನ ಪ್ರೋಜೆಕ್ಟ್ ಸೇರಿತ್ತು. ಕೋವಿಡ್ ಕಾರಣದಿಂದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಮುಂದೂಡಿ ಆನಂತರದಲ್ಲಿ ಆನ್‌ಲೈನ್ ಮೋಡ್‌ನಲ್ಲಿ ನಡೆಸಿ ಇದೇ ಸ್ಪೆಪ್ಟಂಬರ್ 8 ರಂದು ಫಲಿತಾಂಶವನ್ನು ಪ್ರಕಟಮಾಡಲಾಯಿತು. ದೇಶದ 60 ಪ್ರಾಜೆಕ್ಟಗಳು ಆಯ್ಕೆಯಾಗಿದ್ದು ಕರ್ನಾಟಕಕ್ಕೆ 5 ಸ್ಥಾನಗಳು ಲಭಿಸಿವೆ.

ಅದರಲ್ಲಿ ದೇವೇಗೌಡನ ಪ್ರೋಜೆಕ್ಟ್ 3 ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯದ ಗಡಿಗ್ರಾಮದ ಕಾಡಂಚಿನಲ್ಲಿ ಇರುವ ಬಡ ಕೂಲಿ ಕುಟುಂಬದಿಂದ ಬಂದಂತಹ ದೇವೇಗೌಡ ಆವಿಷ್ಕಾರ ಮಾಡಿರುವ ಆಧುನಿಕ ದನದ ಕೊಟ್ಟಿಗೆ ಪ್ರೋಜೆಕ್ಟ್ ದೇಶದಲ್ಲಿ ಆಯ್ಕೆಯಾಗಿ 23 ನೇ ಸ್ಥಾನವನ್ನು ಪಡೆದು, ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿರುವುದು ತಾಲ್ಲೂಕಿನ ಹೆಮ್ಮೆಯಾಗಿದೆ.
ಶಾಲೆಯ ವಿಜ್ಞಾನ ಶಿಕ್ಷಕ ಶಿವಶಂಕರಾಚಾರಿ.ಕೆ ಅವರ ಮಾರ್ಗದರ್ಶನದಲ್ಲಿ ದೇವೇಗೌಡ ಪಶು ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಹಾಗೂ ಹೈನುಗಾರಿಕೆ ರೈತರನ್ನು ಸಂಪರ್ಕಿಸಿ ದನದ ಕೊಟ್ಟಿಗೆಯಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದಾನೆ. ಎಲ್ಲಾ ರೀತಿಯಿಂದ ಜಾನುವಾರುಗಳನ್ನು ರಕ್ಷಣೆ ಮಾಡುವ ಕಾರ್ಯತಂತ್ರದೊಂದಿಗೆ ಈ ಆವಿಷ್ಕಾರ ಮಾಡಿದ್ದಾನೆ.
ಕೊಟ್ಟಿಗೆಯಲ್ಲಿ ಇರುವ ರಾಸು ಕಳ್ಳತನ, ಬೆಂಕಿ ಅವಘಡವಾದರೆ ಕರೆಗಂಟೆ ಬಾರಿಸುತ್ತೆ, ಬೇಸಿಗೆ ಹಾಗೂ ಚಳಿಗಾಲಕ್ಕೆ ಅವನಿಯಂತ್ರಿತವಾಗುತ್ತೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆ, ವಿದ್ಯುತ್ ದೀಪ ಹಾಗೂ ಪ್ಯಾನ್ ವ್ಯವಸ್ಥೆ, ಮೋಟಾರ್ ಚಾಲಿತ ಸಗಣಿ ತಳ್ಳುವುದು, ರಬ್ಬರ್ ನೆಲಹಾಸು, ಕಾಡು ಪ್ರಾಣಿಯನ್ನು ತಡಯಬಲ್ಲ ಕಿಟಕಿ ವ್ಯವಸ್ಥೆಯನ್ನು ಈ ಆಧುನಿಕ ದನದ ಕೊಟ್ಟಿಗೆ ಹೊಂದಿದೆ.
ಇದನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಿಸಿಕೊಳ್ಳಬಹುದಾಗಿದ್ದು ರೈತ ಸ್ನೇಹಿ ಆಗಿರುವ ಈ ಪ್ರೋಜೆಕ್ಟ್‌ನನ್ನು ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನಕ್ಕೆ ರಾಮನಗರ ಜಿಲ್ಲಾ ಪಂಚಾಯಿತಿ, ಕನಕಪುರ ತಾಲ್ಲೂಕು ಪಂಚಾಯಿತಿ ಯೋಜನೆ ರೂಪಿಸುತ್ತಿದೆ. ರೈತರು ಈ ಪ್ರೊಜೆಕ್ಟ್‌ನ್ನು ಅನುಷ್ಠಾನಗೊಳಿಸಿಕೊಂಡರೆ ಬೆಂಕಿ ಅವಘಡ, ಕಾಡುಪ್ರಾಣಿಗಳ ದಾಳಿ ಮತ್ತಿತರರ ಸಮಸ್ಯೆಗಳಿಂದ ರಾಸುಗಳನ್ನು ರಕ್ಷಿಸಬಹುದಾಗಿದೆ.




