ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು: ಎಸ್ ಆರ್ ಹಿರೇಮಠ ಆಗ್ರಹ

ಹುಬ್ಬಳ್ಳಿ : ಈಗಾಗಲೇ ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಈವರೆಗೂ ಜನ ವಿರೋಧಿತಾಗಿದ್ದ ಮೂರು ಕರಾಳ ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆಯುವುದರ ಕುರಿತು ತುಟಿಬಿಚ್ಚುತ್ತಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ 3 ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಜನಾಂದೋಲನ ಮಹಾಮೈತ್ರಿ ಮುಖ್ಯಸ್ಥ ಎಸ್.ಆರ್.ಹಿರೇಮಠ ಅಗ್ರಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯಿದೆಯನ್ನು ರೈತರ ಆಕ್ರೋಶ ಹಾಗೂ ಜನಾಕ್ರೋಶಕ್ಕೆ ಮಣಿದು ರದ್ದುಗೊಳಿಸಿದೆ. ಅದೇ ಮಾರ್ಗದಲ್ಲಿ ರಾಜ್ಯ ಸರ್ಕಾರ 2020 ಸೆಪ್ಟೆಂಬರ್ ನಲ್ಲಿ ತಿದ್ದುಪಡಿ ತಂದಿರುವ ಕೃಷಿ ಕಾಯಿದೆಯನ್ನು ಕೈಬಿಡಬೇಕಾಗಿತ್ತು. ಆದರೆ ಅದನ್ನು ಈವರೆಗೂ ರಾಜ್ಯ ಸರ್ಕಾರ ಮಾಡಿಲ್ಲ, ಒಂದು ವೇಳೆ ಮಾಡದಿದ್ದಲ್ಲಿ ಜನಾಂದೋಲನಗಳ ಮಹಾಮೈತ್ರಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ರಾಜ್ಯಾದ್ಯಂತ ಜನ ಜಾಗೃತಿ ಜಾಥಾ ನಡೆಸುವ ಮೂಲಕ ಜನರನ್ಮು ಈ ಕುರಿತು ಜಾಗೃತಿಯನ್ನು ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯವ್ಯಾಪಿ ಜನಜಾಗೃತಿ ಜಾಥಾ:
ಜನಾಂದೋಲನಗಳ ಮಹಾಮೈತ್ರಿಯಿಂದ ಕಳೆದ 2021 ಡಿ.26 ರಂದು ಮೈಸೂರು ಹಾಗೂ ಧಾರವಾಡದಲ್ಲಿ ಸಾಮಾನ್ಯ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಕೃಷಿ ಕಾಯಿದೆ ರದ್ದತಿ ಹಾಗೂ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟದ ಕುರಿತು ಚರ್ಚೆ ನಡೆಸಿ, ಯುವಕರಲ್ಲಿ ಜಾಗೃತಿ ಮೂಡಿಸಲು ತೀರ್ಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ರಾಜ್ಯ ಬಜೆಟ್ ಅಧಿವೇಶನದವರೆಗೆ ರಾಜ್ಯಾದ್ಯಂತ ಜನಜಾಗೃತಿ ಜಾಥಾಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಬಸವಕಲ್ಯಾಣ ಮತ್ತು ಮಹದೇಶ್ವರ ಬೆಟ್ಟದಿಂದ ಜಾಥಾ ನಡೆಸಿ ಜನರ ಬೇಡಿಕೆ, ಅಭಿಪ್ರಾಯ ಸಂಗ್ರಹಿಸಿ ಬೆಂಗಳೂರಿನಲ್ಲಿ ಬೃಹತ ಸಮಾವೇಶ ನಡೆಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಇದರ ಜೊತೆಗೆ ಕೃಷಿ ಕಾಯಿದೆ ರದ್ದುಗೊಳಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಹರದ್ವಾರದಲ್ಲಿ ದ್ವೇಷಪೂರಿತ ಭಾಷಣ ಖಂಡನೀಯ :
ಹರಿದ್ವಾರದ ಧರ್ಮ ಸಂಸದದಲ್ಲಿ ಮುಸ್ಲಿಂರ ಹತ್ಯಾಕಾಂಡ ಮತ್ತು ಅವರ ವಿರುದ್ಧ ಆಯುಧಗಳ ಬಳಕೆಗೆ ಬಹಿರಂಗವಾಗಿ ಕರೆ ನೀಡುವ ದ್ವೇಷಪೂರಿತ ಭಾಷಣ ನಡೆದಿರುವುದು ಖಂಡನೀಯವಾಗಿದೆ. ಇದನ್ನು ಸಿಟಿಜನ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ತೀವ್ರವಾಗಿ ಖಂಡಿಸುವುದು, ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯೆಪ್ರವೇಶಿಸಿ ದೇಶದ ಗೌರವ ಉಳಿಸಿರುವುದು ಸ್ವಾಗತರ್ಹವಾಗಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿಗಳು, ಗೃಹ ಸಚಿವರು ಹಾಗೂ ಉತ್ತರಾಖಂಡದ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೇ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ತಮ್ಮ ಹುದ್ದೆಗಳಿಗೆ ರಾಜೀರಾಮೆ ನೀಡಬೇಕೆಂದು ಒತ್ತಾಯಿಸಿದರು.
