ವೈದ್ಯರ ನಡೆ-ಹಳ್ಳಿಯ ಕಡೆ” ಕಾರ್ಯಕ್ರಮಕ್ಕೆ ಚಾಲನೆ

ದೇವನಹಳ್ಳಿ: ಕೋವಿಡ್ ಸೋಂಕು ವ್ಯಾಪಿಸುತ್ತಿರುವುದರಿಂದ ಜನರಿಗೆ ಎಚ್ಚರಿಕೆ ನೀಡುವುದರೊಂದಿಗೆ ಸೂಕ್ತ ನಿಯಂತ್ರಣಕ್ಕಾಗಿ ಹಮ್ಮಿಕೊಂಡಿರುವ “ವೈದ್ಯರ ನಡೆ-ಹಳ್ಳಿಯ ಕಡೆ” ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಇ.ರವಿಕುಮಾರ್ ಚಾಲನೆ ನೀಡಿದರು.
ತಾಲ್ಲೂಕು ಆಡಳಿತ ಭವನದ ಮುಂಭಾಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಮನೆಗಳಿಗೆ ವೈದ್ಯಕೀಯ ತಂಡ ಭೇಟಿ ನೀಡಲಿದ್ದು, ಸಂದರ್ಭದಲ್ಲಿ, ಕೋವಿಡ್ ಪರೀಕ್ಷೆ, ಆರೋಗ್ಯ ತಪಾಸಣೆ ಹಾಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಪ್ರತೀ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 15 ತಂಡಗಳಂತೆ ಜಿಲ್ಲೆಯಲ್ಲಿ ಒಟ್ಟು 60 ವೈದ್ಯಕೀಯ ತಂಡಗಳು ಕಾರ್ಯನಿರ್ವಹಿಸಲಿವೆ. ಪ್ರತೀ ತಂಡದಲ್ಲೂ ಓರ್ವ ವೈದ್ಯರ ಸಹಿತ ನರ್ಸಿಂಗ್ ಸಿಬ್ಬಂದಿ, ಲಸಿಕೆ ನೀಡುವ ಸಿಬ್ಬಂದಿಗಳಿರುತ್ತಾರೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಕಾರ್ಯನಿರ್ವಹಿಸುವ ವೈದ್ಯಕೀಯ ತಂಡಕ್ಕೆ ನಸಾರ್ವಜನಿಕರು ಸಹಕಾರ ನೀಡಬೇಕು ಹಾಗೂ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣ ಹೊಂದಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ವೈದ್ಯಕೀಯ ತಂಡದೊಂದಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 231 ಬೆಡ್ ಗಳು ಲಭ್ಯವಿದೆ. ಖಾಸಗಿ ಆಸ್ಪತ್ರೆಯಲ್ಲಿ 40 ಹಾಸಿಗೆ ಮೀಸಲಿಡಲಾಗಿದೆ. ಕೋವಿಡ್ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆ ಇದ್ದರೂ ಸಹ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 4 ವಾರ್ ರೂಂ ಇದೆ. ಅಲ್ಲಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.
ದೇವನಹಳ್ಳಿ ತಹಸೀಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.




