ನಿಧಿಗಾಗಿ ವಾಮಾಚಾರ, ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು

ಕೊಡಗು : ವಿರಾಜಪೇಟೆ ತಾಲೋಕಿನ ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ ನಿಧಿ ಶೋಧನೆ ನಡೆಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ. ಜನವರಿ 8ರಂದು ಖಚಿತ ಮಾಹಿತಿ ಮೇರೆ ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಮನೆಯೊಂದರ ಮೇಲೆ ದಾಳಿ ನಡೆಸಿ ನಿಧಿ ಶೋಧನೆಯಲ್ಲಿ ತೊಡಗಿದ್ದ ಎಂ.ಆರ್ ಗಣೇಶ್ ಹಾಗೂ ಉಡುಪಿ ಮೂಲದ ಸಾಧಿಕ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಬ್ಬರು ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳ ಬಲೆಗೆ ಬಿದ್ದು ಮೌಡ್ಯತೆಯಿಂದ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿ ಇದೆಯೆಂದು ಸುಮಾರು 15 ಅಡಿಗಳಷ್ಟು ಮಣ್ಣು ತೆಗೆದು ಗುಂಡಿ ತೋಡಿದ್ದರು.
ನಿಧಿ ಶೋಧನೆಯ ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಬಲಿ ಪೂಜೆ ನಡೆಸಲು ನಿರ್ಧರಿಸಲಾಗಿತ್ತೆಂದು ಆರೋಪಿಗಳಿಂದ ತಿಳಿದಿದ್ದು ಸಂಭವನೀಯ ಭಾರಿ ಅನಾಹುತ ತಪ್ಪಿದಂತಾಗಿದೆ.
ವಾಮಾಚಾರದ ಮೌಡ್ಯತೆಯಿಂದ ಇನ್ನೂ ಸ್ವಲ್ಪ ಮಣ್ಣು ತೆಗೆದಿದ್ದಲ್ಲಿ ಮನೆ ಕುಸಿತ ಮನೆಯವರೆಲ್ಲಾ ಸಾಯುವ ಬೀತಿ ಎದುರಾಗಿತ್ತು. ಪೊಲೀಸರು ಆರೋಪಿಗಳಲ್ಲಿ ಇಬ್ಬರನ್ನು ಬಂದಿಸಿದ್ದು ಪರಾರಿಯಾದ ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ವಾಮಾಚಾರಕ್ಕಾಗಿ ಬಳಸಲಾಗಿದ್ದ ವಸ್ತುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡು ಹಾಕಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.



