
ಸ್ನೇಹಾ ದುಬೆ. ಮೊನ್ನೆ ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಕಾಶ್ಮೀರ ವಿಚಾರವನ್ನೆತ್ತಿ ಮಾತನಾಡಿದಾಗ ಭಾರತದ ಪರವಾಗಿ ಸರಿಯಾಗಿಯೇ ತಿರುಗೇಟು ಕೊಟ್ಟ ರಾಜತಾಂತ್ರಿಕ ಅಧಿಕಾರಿ.
ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿರುವ ಸ್ನೇಹಾ, ಪಾಕಿಸ್ತಾನದಲ್ಲಿನ ಭಯೋತ್ಪಾದನೆ ಕುರಿತ ಗುಡುಗಿನಂಥ ಉತ್ತರಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರರಾಗಿರುವ ಕಿರಿಯ ವಯಸ್ಸಿನ ರಾಯಭಾರಿ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಉತ್ತರಿಸುತ್ತ ಸ್ನೇಹಾ ದುಬೆ ಆಡಿದ ಮಾತುಗಳ ಸ್ಯಾಂಪಲ್ ನೋಡಬೇಕು:
“ಪಾಕಿಸ್ತಾನ ಎಂಥ ದೇಶವೆಂದರೆ, ಅಗ್ನಿಶಾಮಕ ಪಡೆಯ ವೇಷದಲ್ಲಿ ತೋರಿಸಿಕೊಳ್ಳುತ್ತ ಸ್ವತಃ ಬೆಂಕಿ ಹಚ್ಚುತ್ತದೆ. ನೆರೆಯ ದೇಶಗಳನ್ನು ನಾಶ ಮಾಡಲೆಂದು ಪಾಕಿಸ್ತಾನವು ತನ್ನ ಹಿತ್ತಿಲಲ್ಲಿ ಉಗ್ರರನ್ನು ಪೋಷಿಸುತ್ತಿದೆ. ಭಾರತದ ಪ್ರದೇಶ, ಅಷ್ಟೇ ಅಲ್ಲ, ವಾಸ್ತವವಾಗಿ ಇಡೀ ಪ್ರಪಂಚವು ಪಾಕ್ ನೀತಿಗಳಿಂದಾಗಿ ತೊಂದರೆ ಅನುಭವಿಸಿದೆ. ಮತ್ತೊಂದೆಡೆ ಅದು ತನ್ನ ನೆಲದಲ್ಲಿನ ಮತೀಯ ಹಿಂಸೆಯನ್ನು ಭಯೋತ್ಪಾದಕ ಕೃತ್ಯಗಳೆಂದು ಮುಚ್ಚಿಡಲು ಪ್ರಯತ್ನಿಸುತ್ತಿದೆ” ಎಂದು ಸ್ನೇಹಾ ದುಬೆ ಹೇಳುತ್ತಿದ್ದರೆ, ಪಾಕ್ ಪ್ರಧಾನಿಗೆ ನಾಲಿಗೆ ಹೊರಳದಂತಾಗಿರಬೇಕು.
ಪಾಕಿಸ್ತಾನದ ನಾಯಕ ಭಯೋತ್ಪಾದಕ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಕೇಳಿದ್ದೇವೆ. ಭಯೋತ್ಪಾದಕತೆಯ ಕುರಿತ ಇಂಥ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ದುಬೆ ಗುಡುಗಿದ್ದರು.
ಆ್ಯಂಕರ್ಗೆ ಬಾಗಿಲ ದಾರಿ ತೋರಿಸಿದ ಅಧಿಕಾರಿ
ಸ್ನೇಹಾ ದುಬೆ ಒಬ್ಬರಾಜತಾಂತ್ರಿಕ ಅಧಿಕಾರಿಯಾಗಿ ಪಾಕ್ಗೆ ಕೊಟ್ಟ ಹೊಡೆತ ಅತ್ಯಂತ ಬಲಯುತವಾದುದು. ಅದಾದ ಬಳಿಕ ಸುದ್ದಿಯಲ್ಲಿರುವ ಸ್ನೇಹಾ, ಮತ್ತೊಮ್ಮೆ ಸುದ್ದಿಯಾಗಿರುವುದು, ಹಿಂದಿ ಚಾನೆಲ್ ಒಂದರ ಆ್ಯಂಕರ್ ಅಂಜನಾ ಓಂ ಕಶ್ಯಪ್ಗೆ ಕೊಟ್ಟ ದಿಟ್ಟ ಪ್ರತಿಕ್ರಿಯೆಯ ಮೂಲಕ.
ಪಾಕ್ಗೆ ಖಡಕ್ ಉತ್ತರ ಕೊಟ್ಟ ರಾಜತಾಂತ್ರಿಕ ಅಧಿಕಾರಿಯೊಡನೆ ವಿಶೇಷ ಸಂದರ್ಶನದ ಆಸೆಯಿಂದ ಸ್ನೇಹಾ ದುಬೆಯಿದ್ದ ಕೋಣೆಗೆ ಕೆಮರಾದೊಂದಿಗೆ ನೇರವಾಗಿ ಪ್ರವೇಶಿಸಿದ್ದ ಅಂಜನಾ ಕಶ್ಯಪ್, ಸ್ನೇಹಾ ಅವರ ಮೈಮುಟ್ಟ್ಇ ಮಾತನಾಡುವ ಸಲಿಗೆಯನ್ನೂ ತೋರಿಸಿಬಿಡುತ್ತಾರೆ. ಅದನ್ನು ನಯವಾಗಿಯೇ ಒಪ್ಪಿಕೊಳ್ಳದವರಂತೆ ತೋರಿಸಿಕೊಂಡ ಸ್ನೇಹಾ, ಬಳಿಕ ಬಾಗಿಲೆಡೆಗೆ ಕೈತೋರಿಸಿ ಗೆಟ್ ಔಟ್ ಎಂಬುದನ್ನು ಮೌನವಾಗಿಯೇ ಹೇಳುತ್ತಾರೆ. ಸ್ನೇಹಾ ಅವರ ಈ ದಿಟ್ಟ ಮತ್ತು ಅದಕ್ಕಿಂತ ಹೆಚ್ಚಾಗಿ ನಿರ್ದಾಕ್ಷಿಣ್ಯ ನಡೆ, ಆ ವಿಡಿಯೋ ಕ್ಲಿಪ್ ವೈರಲ್ ಆಗಿಬಿಟ್ಟಿದೆ.

ಜೆಎನ್ಯು ವಿದ್ಯಾರ್ಥಿನಿ ಸ್ನೇಹಾ
2012ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ಸ್ನೇಹಾ, ಗೋವಾ ಮೂಲದವರು. ಪುಣೆಯ ಫರ್ಗ್ಯುಸನ್ ಕಾಲೇಜಿನ ಪದವೀಧರೆ. ಅದಾದ ಬಳಿಕ ಅವರು ದೆಹಲಿಯ ಜೆಎನ್ಯುನಲ್ಲಿ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಎಂಫಿಲ್ ಮುಗಿಸಿದರು.
ಈ ಕಿರಿಯ ರಾಯಭಾರಿ ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದದ್ದು ಗೋವಾದಲ್ಲಿ. ಅಲ್ಲಿಯೇ ಅವರ ಆರಂಭಿಕ ಶಿಕ್ಷಣವೂ ಆಯಿತು. ತಾನೊಬ್ಬ ಐಎಫ್ಎಸ್ ಅಧಿಕಾರಿಯಅಗಬೇಕೆಂದು ಅವರು ಬಯಸಿದಾಗ ಅವರಿಗೆ 12 ವರ್ಷ ವಯಸ್ಸು. ತಮ್ಮ ಕನಸನ್ನು ಕೈಗೂಡಿಸಿಕೊಂಡೇಬಿಟ್ಟರು ಸ್ನೇಹಾ.
2011ರಲ್ಲಿ ಮೊದಲ ಪ್ರಯತ್ನದಲ್ಲಿಯೇ ಅವರು ನಾಗರಿಕ ಸೇವಾ ಪರೀಕ್ಷೆ ಪಾಸಾದರು. ಅದರೊಂದಿಗೆ ತಮ್ಮ ಕುಟುಂಬದಲ್ಲಿಯೇ ಸರ್ಕಾರಿ ಸೇವೆಗೆ ಸೇರಿದ ಮೊದಲ ವ್ಯಕ್ತಿಯಾದರು.
ಅಂತಾರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಕಲಿಯುವ, ಹೊಸ ಸಂಸ್ಕೃತಿಗಳ ಬಗ್ಗೆ ತಿಳಿಯುವ ಅವಕಾಶವಿರುವ ವಿದೇಶಾಂಗ ಸೇವೆ ಬಗ್ಗೆ ಅವರೊಳಗೆ ಆಕರ್ಷಣೆ ಇದ್ದೇ ಇತ್ತು.
ಐಎಫ್ಎಸ್ಗೆ ಆಯ್ಕೆಯಾದ ಬಳಿಕ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸ್ನೇಹಾ ಕೆಲಸ ಮಾಡಿದ್ದರು. 2014ರ ಆಗಸ್ಟ್ನಲ್ಲಿ ಮ್ಯಾಡ್ರಿಡ್ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ ಬಂತು.
ಪ್ರಸ್ತುತ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.



