
ಬೆಂಗಳೂರು: ಮೂರು ಕೃಷಿ ಕಾಯಿದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿ ರೈತರು ದೀರ್ಘವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕಿರುವುದು ತಾತ್ಕಾಲಿಕ ಗೆಲುವು. ಘೋರವಾದ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಾರೆ. ಈ ಕುರಿತು ದೇಶವಾಸಿಗಳು, ಅದರಲ್ಲೂ ರೈತರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಟ್ಲರ್ ಶಾಹಿ ಆಡಳಿತ ಮಾಡಿದರೆ ಐದು ರಾಜ್ಯಗಳ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯಲಿ ಆಮೇಲೆ ನೋಡೋಣ ಎಂದು ರೈತ ದ್ರೋಹಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ಸು ಪಡೆಯಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ಮೋದಿಯವರು “ ಕಾಯ್ದೆಗಳು ಸರಿಯಾಗಿದ್ದವು, ಆದರೆ ಅವುಗಳನ್ನು ಅರ್ಥಮಾಡಿಸುವಲ್ಲಿ ಸೋತೆವು ಎಂದು ಹೇಳಿದ್ದಾರೆ”. ತಾವು ಕೆಟ್ಟ ಮತ್ತು ಜನದ್ರೋಹಿಯಾದ ಕಾಯ್ದೆಗಳನ್ನು ತಂದಿದ್ದೆವು ಎಂದು ಅವರಿಗೆ ಗೊತ್ತಿದ್ದರೂ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾಗಿ ಕಾಯ್ದೆಗಳ ಹಿಂತೆಗೆತವೆಂಬುದು ತಾತ್ಕಾಲಿಕ ಎನ್ನಿಸುತ್ತಿದೆ ಎಂದಿದ್ದಾರೆ.
ಸ್ವಾಮಿನಾಥನ್ ವರದಿಯನ್ನು ಅಂಗೀಕರಿಸಿ ವೈಜ್ಞಾನಿಕ ಬೆಲೆ ಜಾರಿಗೊಳಿಸಬೇಕು. ರೈತರು ಬೆಳೆವ ಪ್ರತಿ ಉತ್ಪನ್ನಕ್ಕೂ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಅದನ್ನು ಕಾನೂನುಬದ್ಧಗೊಳಿಸಬೇಕು. ಸರ್ಕಾರ ನಿಗದಿಪಡಿಸಿದ ಬೆಲೆಗಳಿಗಿಂತ ಕಡಿಮೆ ದರಕ್ಕೆ ಕೊಳ್ಳುವುದನ್ನು ನಿರ್ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವೈಜ್ಞಾನಿಕ ದರವು ಕೊಳ್ಳುವ ಗ್ರಾಹಕರಿಗೂ ಅನ್ವಯಿಸಬೇಕು. ಅದಾನಿ, ಅಂಬಾನಿ, ದಮಾನಿ ಮುಂತಾದ ಬೃಹತ್ ಕಾರ್ಪೊರೇಟ್ ಮಧ್ಯವರ್ತಿಗಳನ್ನು ಮುಲಾಜಿಲ್ಲದೆ ನಿರ್ಬಂಧಿಸಬೇಕು. ರೈತರು ಮತ್ತು ಗ್ರಾಹಕರನ್ನು ಒಂದೆ ವೇದಿಕೆಗೆ ತರುವ ವ್ಯವಸ್ಥೆಗಳನ್ನು ರೂಪಿಸಬೇಕು. ಹೋಬಳಿ, ದೊಡ್ಡ ಗ್ರಾಮ ಪಂಚಾಯತ್ ಕೇಂದ್ರಗಳಲ್ಲೂ ಎಪಿಎಂಸಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
ಬಿಜೆಪಿ ದೇಶದ ಕ್ಷಮೆ ಕೇಳಲಿ
ಹುತಾತ್ಮ ರೈತರ ಕುಟುಂಬಗಳಿಗೆ ಹುತಾತ್ಮ ರೈತರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನೀಡಬೇಕು. ಯೋಧರಿಗೆ ನೀಡಿದಷ್ಟೇ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ರೈತರನ್ನು, ಪ್ರತಿಭಟನಾಕಾರರನ್ನು, ವಿರೋಧ ಪಕ್ಷಗಳನ್ನು ಆಂದೋಲನ ಜೀವಿಗಳೆಂದು, ದೇಶದ್ರೋಹಿಗಳೆಂದು ಅಣಕಿಸಿದ ಬಿಜೆಪಿ ಸರ್ಕಾರಗಳು ಮತ್ತು ಮುಖಂಡರು ದೇಶದ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದಾರೆ.
ತೈಲಬೆಲೆ ಮೇಲಿನ ಹೆಚ್ಚುವರಿ ತೆರಿಗೆ ಇಳಿಸಲಿ
ಕೂಡಲೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿಯಂತ್ರಿಸಿ ಕೇಂದ್ರ ಸರ್ಕಾರ ಅಡಿಷನಲ್ ಎಕ್ಸೈಜ್ ಡ್ಯೂಟಿಯ ಮೂಲಕ ಲೂಟಿ ಮಾಡುತ್ತಿರುವುದನ್ನು ಈ ಕೂಡಲೆ ನಿಲ್ಲಿಸಬೇಕು. ತೆರಿಗೆ ರಹಿತವಾಗಿ ಸರಬರಾಜು ಮಾಡಬೇಕು. ಮೋದಿ ಸರ್ಕಾರ ವಿದ್ಯುತ್, ಇಂಧನ, ಕಲ್ಲಿದ್ದಲು ಮತ್ತಿತರ ವಲಯಗಳನ್ನು ಖಾಸಗಿಕರೀಸಲು ಹೊರಟ್ಟಿದ್ದು ತಕ್ಷಣ ಅದನ್ನು ಕೈಬಿಡಬೇಕು



