
ಮೈಸೂರು : ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಶೇ.40ರಷ್ಟು ಪರ್ಸೆಂಟೇಜ್ ಕೊಡಬೇಕು ಅಂತ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನೂ ವಿವರಿಸಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದ್ದಾರೆ.
ಈ ಆರೋಪಗಳನ್ನ ನಾನು ಮಾಡಿದ್ದರೆ ಪ್ರತಿಪಕ್ಷದವರು ಅನ್ನಬಹುದಿತ್ತು. ಆದರೆ ಟೆಂಡರ್ ಪಡೆಯುವವರೆ ಶೇ.40 ಪರ್ಸೆಂಟ್ ಆರೋಪ ಮಾಡಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು. ಪ್ರಧಾನಿ ಮೋದಿಯವರು ‘ನಾ ಕಾವೂಂಗಾ ನಾ ಕಾನೇದೂಂಗಾ’ ಅನ್ನುತ್ತಿದ್ದರು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಡೆಯುವ ಸರ್ಕಾರವನ್ನ ನಾನು ಜೀವಮಾನದಲ್ಲಿ ನೋಡಿಲ್ಲ ಎಂದರು.
ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ದೆಹಲಿ ರೈತರ ಹೋರಾಟದಲ್ಲಿ ಮೃತಪಟ್ಟವರಿಗೆ ತಲಾ 25 ಲಕ್ಷ ಪರಿಹಾರ ನೀಡಬೇಕು. ಇದುವರೆಗೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವವರೂ ರೈತರೇ ಅಲ್ಲ ಎನ್ನುತ್ತಿದ್ದರು. ಈಗ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಈಗ ರೈತರ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್ಸ್ ಪಡೆದಿದ್ದಾರೆ. ಬಿಜೆಪಿಯವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಅಂತ ನಾನು ಹೇಳುವುದಿಲ್ಲ. ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದ್ದು, ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಹೇಳಿದರು.



