
ಕಿರುಗುಂದ ರಫೀಕ್
ಕೊನೆಗೂ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವ ನಿರ್ಧಾರವನ್ನು ನಿನ್ನೆ ಗುರುನಾನಕ್ ಜಯಂತಿಯಂದು ಪ್ರಧಾನಿ ಮೋದಿ ಘೋಷಿಸಿದ್ದು, ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ದೇಶದ ಹಲವೆಡೆ ಪ್ರತಿಭಟನಾ ನಿರತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆಯ ನೈಜತೆಯ ಬಗ್ಗೆ ರೈತ ಸಹೋದರರಿಗೆ ಅರ್ಥಮಾಡಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಹೀಗಾಗಿ ವಾಪಸ್ ಪಡೆಯುತ್ತಿದ್ದೇವೆ. ಸಂಸತ್ ಅಧಿವೇಶನದಲ್ಲಿ ಅಧಿಕೃತವಾಗಿ ಹಿಂಪಡೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಶ್ಚಯರ್ವೆಂದರೆ ಬಿಜೆಪಿಯಲ್ಲೇ ಈ ನಿರ್ಧಾರಕ್ಕೆ ಬಹುತೇಕರಿಂದ ಸಮ್ಮತಿ ವ್ಯಕ್ತವಾಗಿದೆ. ಹಿಂಪಡೆದಿರುವುದಕ್ಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಗುರುನಾನಕರ ಮೇಲಿನ ಗೌರವದಿಂದ ಮೋದಿ ಹಿಂಪಡೆದಿದ್ದಾರೆ ಎಂಬ ಹೇಳಿಕೆಗಳು ವ್ಯಕ್ತವಾಗಿವೆ. ಹಿಂದೆ ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಬಿಜೆಪಿ ಈಗ ಹಿಂಪಡೆದಿರುವುದನ್ನೂ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಆದರೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ಬಿಜೆಪಿಯನ್ನು ಟೀಕಿಸಲು ದೊಡ್ಡ ಪರ್ವತವೇ ಸಿಕ್ಕಂತಾಗಿದೆ. ಮುಂಬರುವ ಉತ್ತರಪ್ರದೇಶ ಮತ್ತು ಪಂಜಾಬ್ ಚುನಾವಣೆ ಸೋಲುವ ಭಯದಲ್ಲಿ ಈ ನಿರ್ಧಾರ ಕೈಗೊಂಡಿದೆ ಇವೆಲ್ಲಾ ಚುನಾವಣೆಯ ತಂತ್ರ ಎಂದು ವಿಪಕ್ಷಗಳು ಟೀಕಿಸಿವೆ. ಹಾಗೆಯೇ ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅವರ ಜೀವಕ್ಕೆ ಯಾರು ಹೊಣೆ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡಿವೆ.
ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸಿಖ್ಖರು, ಜಾಟರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಹೋರಾಟವನ್ನು ಬೆಂಬಲಿಸಿದರು. ವೆಸ್ಟನ್ ಉತ್ತರ ಪ್ರದೇಶದ 90 ಕ್ಷೇತ್ರಗಳಲ್ಲಿ ಹೋರಾಟಗಾರರು ಪ್ರಭಾವ ಹೊಂದಿರುವುದರಿಂದ ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಬಿಜೆಪಿಯ ಗಾಡಿ ಜಾರಿದೆ. ಹೀಗಾಗಿ ಯೂ ಟರ್ನ್ ಹೊಡೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಅನೇಕ ಮಾಧ್ಯಮಗಳೂ ಬೆಂಬಲಿಸಿದ್ದವು:
ವಿವಾದಿತ ಕೃಷಿ ತಿದ್ದುಪಡಿ ಮಸೂದೆಯ ಪರವಾಗಿ ಬಿಜೆಪಿಯ ನಾಯಕರಿಗಿಂತ ಹೆಚ್ಚಾಗಿ ಅನೇಕ ಮಾಧ್ಯಮಗಳೇ ಪ್ರಚಾರ ಮಾಡಿದ್ದವು. ಕೃಷಿ ಸುಧಾರಣೆಗೆ ಮಹತ್ತರ ಕಾಯ್ದೆಗಳಾಗಿವೆ ಎಂದು ಹಾಡಿ ಹೊಗಳುತ್ತಾ, ಒಂದರ ಮೇಲೊಂದು ಎಪಿಸೋಡ್ ಗಳನ್ನೇ ಹರಿಬಿಟ್ಟಿದ್ದವು. ಅಲ್ಲದೆ ಕಾಯ್ದೆಗಳನ್ನು ವಿರೋಧಿಸುವವರನ್ನು, ರೈತ ಹೋರಾಟಗಾರರನ್ನು ತಿಳುವಳಿಕೆಯೇ ಇಲ್ಲದವರು ಎಂಬಂತೆ ಬಣ್ಣಿಸುವ ಕಾರ್ಯವೂ ನಡೆದಿತ್ತು. ಈಗ ಸರ್ಕಾರ ಬಿಗ್ ಯೂಟರ್ನಿನಿಂದ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಕಾಯ್ದೆಗಳ ಪರವಾಗಿ ಇದ್ದವರಿಗೆ ಈಗ ಯಾವ ರೀತಿ ಪ್ರತಿಕ್ರಿಯಿಸುವುದೆಂದೇ ತಿಳಿಯದಂತಾಗಿದೆ. ತೀವ್ರ ಗೊಂದಲಕ್ಕೀಡಾಗಿದ್ದಾರೆ.
“ಪ್ರಧಾನಿ ಕೇವಲ ಘೋಷಣೆ ಮಾಡಿದರೆ ಸಾಲದು, ಸಂಸತ್ತಿನಲ್ಲಿ ವಾಪಸ್ ಪಡೆಯಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ. ಕೃಷಿ ಸುಧಾರಣೆಗೆ ಎಂಎಸ್ಪಿಯನ್ನು ಬಲಪಡಿಸಿ, ಅದಕ್ಕೆ ಕಾನೂನು ತನ್ನಿ”
-ರಾಕೇಶ್ ಟಿಕಾಯತ್, ಬಿಕೆಯು ನಾಯಕ
“ಸತ್ಯಾಗ್ರಹವು ಅಹಂಕಾರವನ್ನು ಸೋಲಿಸಿದೆ. ಅನ್ಯಾಯದ ವಿರುದ್ಧ ಜಯ ಸಿಕ್ಕಿದೆ. ಕೃಷಿ ಕಾಯ್ದೆಯನ್ನು ಸರ್ಕಾರ ಹಿಂಪಡೆದೇ ಪಡೆಯುವಂತೆ ಮಾಡಲಾಗುತ್ತದೆ. ನನ್ನ ಮಾತು ಬರೆದಿಟ್ಟುಕೊಳ್ಳಿ ಎಂದು ಈ ಹಿಂದೆ ಹೇಳಿದ್ದೆ”
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
“ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಘೋಷಿಸಿರುವ ಪ್ರಧಾನಿ ಮೋದಿ ನಿರ್ಧಾರವನ್ನು ಅಭಿನಂದಿಸುತ್ತೇನೆ. ಜತೆಗೆ ಕಾಯ್ದೆಯನ್ನು ವಿರೋಧಿಸಿ ನಿರಂತರ ಹೋರಾಟ ನಡೆಸಿದ ಪ್ರತಿಭಟನಾಕಾರರಿಗೂ ಸೆಲ್ಯೂಟ್”
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ



