ಸ್ಟ್ಯಾನ್ ಸ್ವಾಮಿ ಕಸ್ಟಡಿ ಸಾವು ಸಮರ್ಥನೀಯವಲ್ಲ: ಸಂಜಯ್ ರಾವತ್

ಎಂ ಹೈದರ್
ಮುಂಬೈ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾ. ಸ್ಟ್ಯಾನ್ ಸ್ವಾಮಿ ಅವರು ಜೈಲಿನಲ್ಲಿರುವಾಗ ಉಸಿರುಕಟ್ಟಿ ಮೃತಪಟ್ಟಿರುವುದು ಸಮರ್ಥನೀಯವಲ್ಲ, ಮರಣ ದಂಡನೆ ವಿಧಿಸಲಾದ ವ್ಯಕ್ತಿಗೆ ಆತನ ಕೊನೆಯ ಇಚ್ಛೆಯನ್ನು ಕೇಳಲಾಗುತ್ತದೆ, 370ನೇ ವಿಧಿಯನ್ನು ಪುನರ್ ಸ್ಥಾಪಿಸಿ ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ಕೊಡಿ ಎನ್ನುವವರನ್ನು ಮಾತನಾಡಿಸಲಾಗುತ್ತಿದೆ, ಆದರೆ ತನ್ನ ಕೈಯಿಂದ ಲೋಟ ಎತ್ತಿ ನೀರು ಕುಡಿಯಲಾಗದ
84 ವರ್ಷದ ಇಳಿ ವಯಸ್ಸಿನ ಪಾ.ಸ್ಟ್ಯಾನ್ ಸ್ವಾಮಿಗೆ ಕನಿಷ್ಠ ಹಕ್ಕನ್ನು ಕೂಡ ನಿರಾಕರಿಸಲಾಗುತ್ತದೆ, ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಭಾನುವಾರ ಬರೆದ ವಾರದ ಅಂಕಣ ರೋಕ್ ಟೋಕ್ ನಲ್ಲಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಮೋದಿ ಸರ್ಕಾರವು 84 ವರ್ಷದ ವ್ಯಕ್ತಿಯೊಬ್ಬರಿಂದ ಅಪಾಯಕ್ಕೆ ಸಿಲುಕುವಷ್ಟು ಇಲ್ಲವೇ ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ದೇಶದ ವಿರುದ್ಧ ಯುದ್ಧ ಸಾರುವಷ್ಟು ಭಾರತದ ಅಡಿಪಾಯವು ದುರ್ಬಲವಾಗಿದೆಯೇ? ಎಂದಿರುವ ಸಂಜಯ್ ರಾವತ್, ಪ್ರಸ್ತುತ ಸರ್ಕಾರವನ್ನು ಟೀಕಿಸುವುದು ದೇಶದ ವಿರುದ್ಧವಾಗುವುದು ಹೇಗೆ? ಸರ್ಕಾರವನ್ನು ಟೀಕಿಸುವುದನ್ನು ದೇಶದ ವಿರುದ್ಧ ಪಿತೂರಿ ಎಂದು ಭಾವಿಸುವುದು ಸರ್ವಾಧಿಕಾರಿ ಮನೋಭಾವದ ದುರ್ಬಲ ಮನಸ್ಥಿತಿ ಎಂದು ಜರಿದಿದ್ದಾರೆ.
ಯವ ನಾಯಕರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರಿಗೆ ಇಂದಿರಾಗಾಂಧಿ ಆಡಳಿತ ಹೆದರಿದಂತೆ, ಮೋದಿ ಸರ್ಕಾರ ಇಳಿ ವಯಸ್ಸಿನ ಸ್ಟ್ಯಾನ್ ಸ್ವಾಮಿ, ವರವರರಾವ್ ಅವರ ಬಗ್ಗೆ ಹೆದರಿದೆ. ಜಾರ್ಜ್ ಫರ್ನಾಂಡೀಸ್ ಅವರಿಗೆ ಪತ್ರಿಕೆಗಳ ಬೆಂಬಲವಿತ್ತು ಅದರೆ ಈಗ ಮಾಧ್ಯಮಗಳು ಸರ್ಕಾದ ಪರವಾಗಿಯೇ ಇವೆ. ಎದಿದ್ದಾರೆ.
ಜನರ ಸ್ವಾತಂತ್ರ್ಯವನ್ನು ಕಸಿಯುವ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿದೆ ಎಂಬುದು ನನಗೆ ಆಶ್ಚರ್ಯ ಉಂಟುಮಾಡಿದೆ, ತನ್ನ ನಿಯಂತ್ರಣ ತಪ್ಪಿ ಹೋಗುವಷ್ಟು ಭಾರತದ ಪರಿಸ್ಥಿತಿ ದುರ್ಬಲವಾಗಿಲ್ಲ, ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಮೋದಿ ಸರ್ಕಾರ ಮಾನಸಿಕವಾಗಿ ದುರ್ಬಲವಾಗಿದೆ ಅದ್ದರಿಂದ ಸರಕಾರವನ್ನು ಟೀಕಿಸುವವರನ್ನು ದೇಶದ್ರೋಹದ ನಿಯಮಗಳ ಅಡಿಯಲ್ಲಿ ಜೈಲಿಗೆ ಅಟ್ಟಲಾಗುತ್ತಿದೆ. ಭಾರತೀಯ ಪತ್ರಿಕಾ ಮಾಧ್ಯಮಗಳು ಕೂಡ ಸರ್ಕಾರವನ್ನು ಟೀಕಿಸುವವರ ವಿರುದ್ಧವೇ ಧ್ವನಿಯನ್ನು ಹೆಚ್ಚಿಸಿ ಸ್ವಾತಂತ್ಯದ ಕತ್ತು ಹಿಸುಕುವವರೊಂದಿಗೆ ಕೈ ಕುಲುಕುತ್ತಿವೆ ಎಂದು ರೋಕ್ ಟೋಕ್ ನಲ್ಲಿ ಭಾನುವಾರ ಕೆಂಡ ಕಾರಿದ್ದಾರೆ.
ಎಲ್ಗರ್ ಪರಿಷತ್ ನ ಚಟುವಟಿಕೆಗಳನ್ನು ಬೆಂಬಲಿಸಲು ಸಾಧ್ಯವಿಲ್ಲ. ಅಲ್ಲಿ ವಿಷಕಾರಿ ಕೂಗಾಟ ಮಾಡಲಾಯಿತು, ಪ್ರಕಾಶ್ ಅಂಬೇಡ್ಕರ್ ಅವರು ಗಲಭೆಯನ್ನು ಪ್ರಚೋದಿಸಿದರು ಶಿವಾಜಿಯ ಟಿ ಶರ್ಟ್ ಧರಿಸಿದವರನ್ನು ಥಳಿಸಲಾಯಿತು, ಈಗ ಮಾನವ ಹಕ್ಕುಗಳಿಗೆ ಚ್ಯುತಿ ಆಗಿದೆ ಎನ್ನುವವರು ಎಲ್ಗಾರ್ ಸಭೆಯ ಬಳಿಕ ನಡೆದ ಗಲಭೆಯಲ್ಲಿ, ಸ್ಟ್ಯಾನ್ ಸ್ವಾಮಿ, ವರವರ ರಾವ್, ಸುಧಾ ಭಾರದ್ವಾಜ್, ಗೌರವ್ ನವಲಖಾ ಸೇರಿದಂತೆ ಹಲವರು ಕಾರಣರು ಎಂಬುವುದನ್ನು ಅರಿಯಬೇಕು ಎಂದು, ನೆನಪಿಸಿದ್ದಾರೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ NIA ಯಿಂದ ಬಂಧಿಸಲ್ಪಟ್ಟಿದ್ದ ಫಾ ಸ್ಟ್ಯಾನ್ ಸ್ವಾಮಿ ಅವರು ಬಂಧನದಲ್ಲಿದ್ದಾಗಲೆ ಜು 5 ರಂದು ಮೃತಪಟ್ಟಿದ್ದರು. ನಂತರ ಸಾಮಾಜಿಕ ಕಾರ್ಯಕರ್ತರಿಂದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ಟ್ಯಾನ್ ಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನಡೆಸಿಕೊಂಡ ಬಗ್ಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿತ್ತು. ಈಗ ಸ್ಟ್ಯಾನ್ ಸ್ವಾಮಿ ಅವರು ನಿಧನರಾದ ವಾರದ ಕೊನೆಯಲ್ಲಿ ರಾವತ್ ಅವರ ಈ ಲೇಖನ ಪ್ರಕಟವಾಗಿದೆ.
