ಕ್ರೇಜಿಸ್ಟಾರ್ ಕುಟುಂಬದಲ್ಲಿ ಮೊಳಗಲಿದೆ ಮಂಗಳವಾದ್ಯ

ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬದಲ್ಲಿ ಸದ್ಯದಲ್ಲೇ ಮಂಗಳವಾದ್ಯದ ಸದ್ದು ಮೊಳಗಲಿದೆಯಂತೆ. ಈಗಾಗ್ಲೆ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಮುಗಿಸಿರುವ ರವಿಚಂದ್ರನ್ ಸೊಸೆಯನ್ನ ಮನೆಗೆ ಕರೆ ತರೋಕೆ ರೆಡಿಯಾಗಿದ್ದಾರೆ. ಸಾಹೇಬನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕ್ರೇಜಿ ಪುತ್ರ ಮನೋರಂಜನ್ ಗೃಹಸ್ಥಾಶ್ರಮಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೊಂಚ ಮಟ್ಟಿಗೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಸಾಹೇಬ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ‘ಬೃಹಸ್ಪತಿ’ಯಾಗಿ ‘ಮುಗಿಲ್ ಪೇಟೆ’ಯಲ್ಲಿ ಕಾಣಿಸಿಕೊಂಡಿದ್ದ ಮನೋರಂಜನ್ ಬಳಿಕ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಸದ್ಯದ ಮಟ್ಟಿಗೆ ಮನೋರಂಜನ್ ನಟನೆಯ ಯಾವುದೇ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಇದೇ ಸುಸಂದರ್ಭವೆಂದುಕೊಂಡ ರವಿಚಂದ್ರನ್ ಮಗನ ಮದುವೆ ಮಾಡಿ ಮುಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.
ಸಿನಿಮಾ ಜರ್ನಿ ಆರಾಮವಾಗಿ ಸಾಗುತ್ತಿದೆ. ಕೌಟುಂಬಿಕ ಜವಬ್ದಾರಿಗಳು ಮುಗಿದಿವೆ. ಹೀಗಾಗಿ ಕಳೆದ ವರ್ಷ ಜೂನ್ ತಿಂಗಳಲ್ಲೇ ಮನೋರಂಜನ್ ಮದುವೆಯಾಗುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ತಂದೆ-ತಾಯಿ ಇಷ್ಟ ಪಟ್ಟ ಹುಡುಗಿಯನ್ನೇ ಮದುವೆಯಾಗೋದಾಗಿ ಸಾಹೇಬ ಹೇಳಿಕೊಂಡಿದ್ದರು. ಆದರೆ ಸಿನಿಮಾದ ಕಮಿಟ್ಮೆಂಟ್ ಹಾಗೂ ಕೋವಿಡ್ ಕಾರಣದಿಂದ ಮದುವೆಯನ್ನ ಕೊಂಚ ಮಟ್ಟಿಗೆ ಮುಂದೂಡಲಾಗಿತ್ತು.
ಇದೀಗ ಕ್ರೇಜಿಸ್ಟಾರ್ ಕುಟುಂಬದಲ್ಲಿ ಮನೋರಂಜನ್ ಮದುವೆಗೆ ತಯಾರಿ ನಡೆಯುತ್ತಿದೆ. ಮನೋರಂಜನ್ ಸಹೋದರ ವಿಕ್ರಮ್ ನಟನೆಯ ತ್ರಿವಿಕ್ರಮ್ ಸಿನಿಮಾ ಕಂಪ್ಲೀಟ್ ಆಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ. ಹೀಗಾಗಿ ತಮ್ಮನ ಸಿನಿಮಾ ರಿಲೀಸ್ ಆದ ಬಳಿಕ ಹಸೆಮಣೆ ಏರೋಕೆ ಮನೋರಂಜನ್ ನಿರ್ಧರಿಸಿದ್ದಾರಂತೆ.
ಮಗಳು ಗೀತಾಂಜಲಿ ಮದುವೆಯಲ್ಲಿ ಮದುವೆ ಮಂಟಪದಿಂದ ಹಿಡಿದು ಪ್ರತಿಯೊಂದು ಕ್ರೇಜಿಸ್ಟಾರ್ ಕಲ್ಪನೆಯಲ್ಲಿ ಮೂಡಿ ಬಂದಿತ್ತು. ಹೀಗಾಗಿ ಈ ಬಾರಿ ರವಿಮಾಮನ ಯಾವ ಕಲ್ಪಾನಲೋಕ ಧರೆಗಿಳಿಯುತ್ತೆ ಅನ್ನೋದನ್ನ ನೋಡಲು ಅಭಿಮಾನಿಗಳು ಕಾತರಿಸ್ತಿದ್ದಾರೆ.



