
ಬೆಳಗಾವಿ: ಕಾಲಿಗೆ ಚಕ್ರ ಕಟ್ಟಿಕೊಂಡು ಮುಂಬೈ, ಮೈಸೂರು, ಬೆಂಗಳೂರು ದೆಹಲಿ ಸುತ್ತುತ್ತಿರುವ ರಮೇಶ್ ಜಾರಕಿಹೊಳಿ, ತಮಗೆ ಅಸಲಿ ವಿಲನ್ ಯಾರು ಎನ್ನುವುದನ್ನು ಬಾಯ್ಬಿಟ್ಟಿಲ್ಲ. ಅವರು ಹೇಳಿದ, ಬೆನ್ನಿಗೆ ಚೂರಿ ಹಾಕಿದ ಮೂವರ ಕಥೆ ಹಲವು ಊಹೆಗಳಿಗೂ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಕಲೆ ಹಾಕುತ್ತಿದ್ದು, ಮಾಹಿತಿ ದಂಗುಬಡಿಸುವಂತಿದೆ.
ಪ್ರಬಲ ಅಲ್ಪಸಂಖ್ಯಾತ ನಾಯಕನಾಗಿ ಗುರುತಿಸಿಕೊಳ್ಳುತ್ತಾ ಸಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನ ಕಟ್ಟಿಹಾಕುವುದು ಅಷ್ಟು ಸುಲಭದ ಕೆಲಸವಲ್ಲ ಆದ್ರೆ ಈಗ ತಾನಾಗೇ ಸಿಕ್ಕಿರುವ ಅದೃಷ್ಟದ ಸಿಡಿ ಕೇಸ್ ಅವಕಾಶವನ್ನೇ ಬಳಸಿಕೊಂಡು ಹಣೆಯಲು ಪಕ್ಷಾತೀತವಾಗಿ ಉತ್ತರ ಕರ್ನಾಟಕದ ರಾಜಕಾರಣಿಗಳು ಸಜ್ಜಾಗಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಲ್ಲಿ ತಿಳಿದುಬಂದಿದೆ ಎನ್ನಲಾಗುತ್ತಿದೆ.
ಕಳೆದ ಮೂರ್ನಾಲ್ಕು ಸರ್ಕಾರಗಳಲ್ಲೂ ಜಾರಕಿಹೊಳಿ ಕುಟುಂಬದ ಯಾರಾದರೂ ಒಬ್ಬರು ಮಂತ್ರಿ ಮಂಡಲಕ್ಕೆ ಫಿಕ್ಸ್ ಆಗುತ್ತಲೇ ಇದ್ದಾರೆ. ಇದರಿಂದ ವೀರಶೈವ ಲಿಂಗಾಯತ ನಾಯಕರು ಕೈ ಕೈ ಹಿಸುಕಿಕೊಂಡಿರುವುದು ಸಾಕಷ್ಟು ಬಾರಿ ಆಗಿದೆ. ಯಮಕನಮರಡಿ, ಗೋಕಾಕ್, ಅರಭಾವಿ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಬೇಕು ಎನ್ನುವುದು ಲಿಂಗಾಯತ ಮುಖಂಡರ ರಾಜಕೀಯ ಲೆಕ್ಕಾಚಾರ. ಆದರೆ ಇದಕ್ಕೆ ಜಾರಕಿಹೊಳಿ ಸಾಮ್ರಾಜ್ಯ ಸವಾಲಾಗಿ ನಿಂತಿದೆ.
ಸವದಿ, ಕತ್ತಿ, ಕೋರೆ, ಜೊಲ್ಲೆ, ಹುಕ್ಕೇರಿ ಕುಟುಂಬಗಳು ಬೆಳಗಾವಿ ಜಿಲ್ಲೆಯಾದ್ಯಂತ ರಾಜಕೀಯ ನೆಲೆ ಕಂಡುಕೊಂಡು ರಾಜ್ಯಭಾರ ಮಾಡುತ್ತಲೇ ಬಂದಿವೆ. ಇವರ ಯಶಸ್ಸಿಗೆ ಎಲ್ಲೋ ಒಂದು ಕಡೆ ಜಾರಕಿಹೊಳಿ ಕುಟುಂಬ ತಮಗೆ ಸವಾಲು ಎಂದುಕೊಂಡಿರುವ ಹಿನ್ನೆಲೆಯಲ್ಲಿ ಶೀತಲ ಯುದ್ಧ ನಡೆಯುತ್ತಲೇ ಬಂದಿದೆ. ಆದರೆ ಸರ್ಕಾರದ ಭಾಗವಾಗಿರುವ ಪ್ರಮುಖ ವ್ಯಕ್ತಿಗಳ ನೇರ ಸಹಾಯ ಇರುವುದರಿಂದ ಹೇಗಾದರೂ ಮಾಡಿ ಹತ್ತಿಕ್ಕಲೇಬೇಕು ಎಂದು ನಿರ್ಧರಿಸಿದಂತೆ ಕಾಣುತ್ತಿದೆ.
ಹಲವಾರು ವರ್ಷಗಳಿಂದ ರಾಜಕೀಯ ಚದುರಂಗದಾಟದಲ್ಲಿ ವಿಶಿಷ್ಟ ನಡೆಯ ಮೂಲಕವೇ ಯಕ್ಷಪ್ರಶ್ನೆ ಆಗಿ ಕಾಡುವ ರಮೇಶ್ ಜಾರಕಿಹೊಳಿ ಇದೆಲ್ಲವನ್ನೂ ಅರಿತು ತಮ್ಮ ದಾಳವನ್ನು ಕೂಡ ಉರುಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಮೂಲೆಗುಂಪಾದರೂ ತಮ್ಮ ಕುಟುಂಬದ ಹಿಡಿತ ತಪ್ಪಬಾರದು ಎನ್ನುವ ನಿಗೂಢ ನಡೆ ಕೂಡ ಎದ್ದು ಕಾಣುತ್ತಿದೆ.
ಸದ್ಯ ಉತ್ತರ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯಶಸ್ವಿ ನಾಯಕನಾಗಬೇಕು ಎಂದು ಹೊರಟಿರುವ ರಮೇಶ್ ಜಾರಕಿಹೊಳಿ ಅಂಡ್ ಪ್ಯಾಮಿಲಿಗೆ ಸದ್ಯ ಎದುರಾಗಿರುವ ವೀರೈಶವ ಲಿಂಗಾಯತ ಸಮುದಾಯದ ಸವಾಲು ಮೂಮದೆ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕು.



