ಪುನೀತ್ ಅಗಲಿ 4 ತಿಂಗಳು ಕಳೆದ ಹಿನ್ನೆಲೆ; ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ನಾಲ್ಕು ತಿಂಗಳುಗಳೇ ಕಳೆದಿದೆ. ಆದ್ರೂ ಕೂಡ ಅವರ ನೆನಪು ಮಾತ್ರ ಹಾಗೆ ಉಳಿದಿದೆ. ಹೀಗಾಗಿ ಅಭಿಮಾನಿಗಳು ಅವರ ನೆನಪಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಅ.29ರಂದು ಅಪ್ಪು ಹೃದಯಾಘಾತದಿಂದ ನಿಧನರಾದಾಗ ಅವರ ಕುಟುಂಬಕ್ಕೆ ಭಾರಿ ನೋವು ಉಂಟು ಮಾಡಿದೆ. ಇಂದಿಗೂ ಕೂಡ ಪುನೀತ್ ಪತ್ನಿ-ಮಕ್ಕಳು ಕಣ್ಣೀರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇಂದು ಫೆಬ್ರವರಿ ತಿಂಗಳ ಕೊನೇ ದಿನ. ಹಾಗಾಗಿ 29ನೇ ತಾರೀಕಿನ ಬದಲಿಗೆ ಒಂದು ದಿನ ಮುಂಚಿತವಾಗಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್ ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಅರ್ಪಿಸಿದ್ದಾರೆ.
ಅಂದಹಾಗೆ ಪುನೀತ್ ನಟಿಸಿದ ಕೊನೇ ಸಿನಿಮಾ ಜೇಮ್ಸ್ ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ಜನ್ಮದಿನದ ಪ್ರಯುಕ್ತ ಮಾ.17ರಂದು ಆ ಚಿತ್ರ ರಿಲೀಸ್ ಆಗಲಿದೆ. ಹೀಗಾಗಿ ಅಭಿಮಾನಿಗಳು ಅಪ್ಪು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
