
ನವದೆಹಲಿ: ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಬರುವಾಗ, ಭಾರತದ ಸುಮಾರು 157 ಬಗೆಯ ಪ್ರಾಚೀನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿರುವ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ ಹಿಂದೆ ಕಳವಾಗಿದ್ದ ಇವುಗಳನ್ನು ಕಳ್ಳರು ಅಮೆರಿಕಕ್ಕೆ ಸಾಗಣೆ ಮಾಡಿದ್ದರು. ಅದನ್ನೀಗ ಅಮೆರಿಕ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹನ್ನೆರಡನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ವಿಗ್ರಹಗಳು ಇವೆ. ಸಾಮಾನ್ಯ ಯುಗಕ್ಕಿಂತಲೂ ಹಿಂದಿನ 45 ಕಲಾಕೃತಿಗಳು, 71 ಸಾಂಸ್ಕೃತಿಕ ಕಲಾಕೃತಿಗಳು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳು ಹಾಗೂ ಬೌದ್ಧಧರ್ಮಕ್ಕೆ ಸೇರಿದ 16 ಕಲಾಕೃತಿಗಳು, ಜೈನಧರ್ಮಕ್ಕೆ ಸೇರಿದ 9 ಕಲಾಕೃತಿಗಳು ಇವೆ.
ಕಂಚಿನ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಶಿವ-ಪಾರ್ವತಿ, ಬುದ್ಧ, ವಿಷ್ಣು ಮತ್ತು 24 ಜೈನ ತೀರ್ಥಂಕರ ವಿಗ್ರಹಗಳಿವೆ. ಕೆಲವು ಸಾಂಸ್ಕೃತಿಕ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳನ್ನು ಭಾರತಕ್ಕೆ ವಾಪಸ್ ತರಲಾಗುತ್ತಿದೆ



