
ಜಿ.ಮುಮ್ತಾಜ್ ಅಲೀಮ್
ಪ್ರಸಕ್ತ ರಾಜಕೀಯ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಜೆಡಿಎಸ್ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಆದಾಗ್ಯೂ ಪಕ್ಷಕ್ಕೆ ಇದು ಹೊಸದೇನಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಹೊರತಾಗಿ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳ ತೀರ್ಪು ಜೆಡಿಎಸ್ ಪಕ್ಷದ ಅಸ್ತಿತ್ವಕ್ಕೆ ಎಚ್ಚರಿಕೆ ಗಂಟೆಯನ್ನು ಬಾರಿಸಿದೆ. ಮತ್ತೊಂದೆಡೆ ಪಕ್ಷದ ಪ್ರಮುಖ ನಾಯಕರು ಒಬ್ಬರಾದ ನಂತರ ಮತ್ತೊಬ್ಬರು ಪಕ್ಷದಿಂದ ಗುಳೇ ಹೋಗುತ್ತಿರುವ ಸನ್ನಿವೇಶ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕೇವಲ ಒಂದು ಜಾತಿ ಅಥವಾ ಪ್ರಾಂತ್ಯ ಅಥವಾ ಕುಟುಂಬಕ್ಕೆ ಜೆಡಿಎಸ್ ಸೀಮಿತವಾಗದೇ ವಿಶಾಲದೃಷ್ಟಿಯಿಂದ ವಿಶಾಲ ಮತ್ತು ಸಾಮೂಹಿಕ ನಾಯಕತ್ವದಲ್ಲಿ ಹೊಸಪಕ್ಷವಾಗಿ ಹೊರಹೊಮ್ಮಬೇಕಿದೆ.
ಒಕ್ಕಲಿಗ ಜನಸಮುದಾಯ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಹೊಂದಿದ್ದ ಜಾತ್ಯಾತೀತ ಜನತಾದಳ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6 ಕ್ಷೇತ್ರಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು ಉಳಿದಂತೆ ಹೀನಾಯ ಸೋಲು ಅನುಭವಿಸಿದೆ.
ಹಾಸನದಲ್ಲಿ ತನ್ನದೇ ಕುಟುಂಬದ ಕುಡಿಯನ್ನು ನಿರಾಯಾಸವಾಗಿ ಗೆಲ್ಲಿಸುವಲ್ಲಿ ಸಫಲವಾಗಿರುವ ಜೆಡಿಎಸ್, ಮೈಸೂರಿನಲ್ಲಿ ತಿಣುಕಾಡಿದ ನಂತರ ಅತಿ ಪ್ರಯಾಸದ ಗೆಲವು ಸಾಧಿಸಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೆದುಮಾತಿನ ಎಚ್ಚರಿಕೆಯ ಗಂಟೆ ನಡುವೆಯೂ ಮತದಾನಕ್ಕೂ ಮುನ್ನ ತಮ್ಮ ಪಕ್ಷಕ್ಕೆ ಬೆಂಬಲ ಕೋರಿದ ಬಿಜೆಪಿ ಧುರೀಣ ಬಿ.ಎಸ್.ಯಡಿಯೂರಪ್ಪ ಮಾತಿಗೆ ಮರುಳಾಗಿ ಚುನಾವಣೆಯಲ್ಲಿ ಕೇಸರಿಪಡೆಗೆ ಪರೋಕ್ಷ ಬೆಂಬಲ ನೀಡುವ ಬಹಿರಂಗ ಘೋಷಣೆ ಮಾಡಿದ ಜೆಡಿಎಸ್ ತನ್ನ ಅಸ್ತಿತ್ವಕ್ಕೆ ತಾನೇ ಸಂಚಕಾರ ತಂದುಕೊಳ್ಳುವ ನಡೆ ಮೇಲ್ಮನೆ ಚುನಾವಣೆಯ ಫಲಿತಾಂಶದಿಂದ ವ್ಯಕ್ತವಾಗಿದೆ.
ಜೆಡಿಎಸ್ ಪಾಲಿಗೆ ಸಾಲು ಸಾಲು ಸೋಲು
ಹಾಗೆ ನೋಡಿದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಇದೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ಮತಗಳನ್ನು ನೆಚ್ಚಿಕೊಂಡು ತುಮಕೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಎದುರು ಚುನಾವಣೆಯಲ್ಲಿ ಪರಾಭವಗೊಂಡರು.
ಸರಿ ಸುಮಾರು ಇದೇ ವೇಳೆ ಮತ್ತೊಂದು ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿತ್ರನಟ ರೆಬಲ್ ಸ್ಟಾರ್ ದಿವಂಗತ ಅಂಬರೀಶ್ ಪತ್ನಿ ಸುಮಲತಾ ಎದುರು ಹೀನಾಯವಾಗಿ ಸೋತರು.
ತದ ನಂತರ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ತೆರೆವಾದ ಸಿಂಧಗಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಜೆಡಿಎಸ್, ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮಾಡು ಇಲ್ಲವೇ ಮಡಿ ಹೋರಾಟ ಮಾಡುವ ಬದಲು ಮುಸ್ಲಿಂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿಯವರನ್ನು ತನ್ನದಾಗಿಸಿಕೊಂಡು ಕಣಕ್ಕಿಳಿಸಿದ್ದ ಕಾಂಗ್ರೆಸ್ ವಿರುದ್ಧ ಸೇಡಿಗೆ ಬಿದ್ದು ಎದುರಾಳಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರ ಪ್ರಚಂಡ ಗೆಲುವಿಗೆ ಪರೋಕ್ಷವಾಗಿ ನೆರವಾಯಿತು.
ಜೆಡಿಎಸ್ ನಾಯಕರ ವಲಸೆ
ಈ ನಡುವೆ ಜೆಡಿಎಸ್ ನ ಪ್ರಮುಖರ ಸಾಲು ಸಾಲು ಸೋಲುಗಳ ನಂತರ ಪಕ್ಷದ ಘಟಾನುಘಟಿ ನಾಯಕರು ಜೆಡಿಎಸ್ ನಿಂದ ವಿಮುಖರಾಗತೊಡಗಿದರು. ಈ ಪೈಕಿ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಗುಬ್ಬಿ ಕ್ಷೇತ್ರ ಶಾಸಕ ಶ್ರೀನಿವಾಸ್ (ವಾಸು), ಕೋಲಾರದ ಶ್ರೀನಿವಾಸಗೌಡ ಜಗಳೂರಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ದೇವೇಂದ್ರಪ್ಪ ಮತ್ತಿತರರು ಪ್ರಮುಖರು.
ತೀರಾ ಇತ್ತೀಚೆಗೆ ವಿಧಾನಪರಿಷತ್ ಚುನಾವಣೆಗೂ ಮುನ್ನ ಮೇಲ್ಮನೆ ಸದಸ್ಯರಾಗಿದ್ದ ಜೆಡಿಎಸ್ ಮುಖಂಡ ಸಂದೇಶ್ ನಾಗರಾಜ್, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲೂ ತನ್ನದೇ ಆದ ಬೆಂಬಲಿಗ ಪಡೆಯನ್ನು ಹೊಂದಿರುವ ಸಿ.ಆರ್.ಮನೋಹರ್ ನಂತರ ಮೇಲ್ಮನೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ಬಹಿರಂಗ ಬೆಂಬಲ ನೀಡಿದ್ದ ಉತ್ತರ ಕರ್ನಾಟಕದ ಮತ್ತೊಬ್ಬ ಪ್ರಮುಖ ನಾಯಕ, ಮಾಜಿ ಶಾಸಕ ಕೋನರೆಡ್ಡಿ ಕೂಡ ಜೆಡಿಎಸ್ ತೊರೆದು ಮಂಗಳವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ಒಂದು ರೀತಿಯಲ್ಲಿ ಜೆಡಿಎಸ್ ವಿರುದ್ಧ ಆಪರೇಷನ್ ಹಸ್ತ ನಡೆಸಿರುವ ಕಾಂಗ್ರೆಸ್ ವಿರುದ್ಧ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ಆದರೆ ಅದಾಗದು ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.
ಇದೇ ಕಾರಣಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಪ್ರತಿ ನಿತ್ಯ ಎಂಬಂತೆ ನಿರಂತರವಾಗಿ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಪಕ್ಷವನ್ನು ಹಿಡಿತದದಲ್ಲಿಟ್ಟುಕೊಂಡು ಮಾಡಬೇಕಾದ ಕೆಲಸವನ್ನು ಬಿಟ್ಟು ನಿತ್ಯ ನಿರಂತರ ಪ್ರಬಲ ಕುರುಬಜನಾಂಗದ ಪ್ರಶ್ನಾತೀತ ನಾಯಕರಾಗಿರುವ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ನಡೆಸಿದರೆ ಜಾತ್ಯಾತೀತ ಜನತಾದಳಕ್ಕೆ ಉಜ್ವಲ ಭವಿಷ್ಯ ರೂಪುಗೊಳ್ಳುವುದೇ ಎಂಬ ಪ್ರಶ್ನೆಯನ್ನು ಇದು ಹುಟ್ಟು ಹಾಕಿದೆ.
ಒಂದು ಕಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ನೊಂದಿಗಿನ ಸಲಿಗೆಯಲ್ಲೇ, ಪರಿಪಕ್ವ ಸಂಘಟನಾ ಚತುರತೆಯನ್ನು ಮೆರೆದು ಜೆಡಿಎಸ್ ಬುಟ್ಟಿಗೆ ಕೈಹಾಕಿದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೈಲೆಂಟಾಗೇ ಒಬ್ಬರಾದ ನಂತರ ಮತ್ತೊಬ್ಬ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುತ್ತಾ ಸಾಗುತ್ತಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಮುಸುಕಿನ ಗುದ್ದಾಟದ ನಡುವೆಯೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬುಟ್ಟಿಗೆ ನೇರವಾಗಿಯೇ ಕೈ ಹಾಕಿ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಸಾಗುತ್ತಿದ್ದರೆ, ಪಕ್ಷ ತೊರೆಯುವವರ ದೊಡ್ಡ ಲಿಸ್ಟೇ ತಮ್ಮ ಬಳಿ ಇದೆ ಎಂದು ಹೇಳುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ , ಕಾರ್ಯಕರ್ತರೇ ತಮ್ಮ ಪಕ್ಷಕ್ಕೆ ಬಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಪಕ್ಷ ತೊರೆಯುತ್ತಿರುವ ಮುಖಂಡರನ್ನು ತೆಗೆಳುತ್ತಾ ಕೂರುವ ಬದಲು ವೈಮನಸ್ಸನ್ನು ಪರಿಹರಿಸಿ, ಪಕ್ಷದ ಉಜ್ವಲ ಭವಿಷ್ಯದ ಕುರಿತು ವಿಶ್ವಾಸ ಮೂಡಿಸುವ ಮೂಲಕ ನಾಯಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದಕ್ಕೆ ಅವರು ಮುಂದಾಗಬೇಕಿದೆ.
ಜತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ರಾಜಕೀಯ ಪಕ್ಷಗಳ ಪೈಕಿ ಸಂದರ್ಭಕ್ಕನುಸಾರ ಯಾವುದೋ ಒಂದು ಪಕ್ಷದತ್ತ ಜೆಡಿಎಸ್ ವಾಲಿದೆ ಎಂಬ ಸಂದೇಶವನ್ನು ರವಾನಿಸದೇ ಉಭಯ ಪಕ್ಷಗಳ ನಡುವೆ ಬ್ಯಾಲೆನ್ಸಿವ್ ನೀತಿ ಅನುಸರಿಸುವ ದೂರದೃಷ್ಟಿಯನ್ನು ಜೆಡಿಎಸ್ ವರಿಷ್ಠರು ಅನುಸರಿಬೇಕಿದೆ. ಜೆಡಿಎಸ್ ಒಂದು ಜಾತಿ ಮತ್ತು ಪ್ರಾಂತ್ಯಕ್ಕೆ ಸೀಮಿತವಾದ ಅವಕಾಶವಾದಿ ಪಕ್ಷ ಎಂಬ ಮಿತಿ ಅಥವಾ ಟೀಕೆಯನ್ನು ಮೀರುವ ಗಂಭೀರ ಪ್ರಯತ್ನಗಳನ್ನು ಮಾಡುವ ಮೂಲಕ ತನ್ನ ಹೆಸರಿಗೆ ತಕ್ಕಂತೆ ಜಾತ್ಯಾತೀತವಾಗಿ ಸರ್ವರ ಹಿತರಕ್ಷಿಸುವ ಪಕ್ಷವಾಗಿ ಹೊರಹೊಮ್ಮಬೇಕಿದೆ.
ಉಪಚುನಾವಣೆಯಲ್ಲಿ ವಿದ್ಯಾವಂತ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಮುಸ್ಲಿಂ ಜನಸಮುದಾಯದಲ್ಲಿ ಕಳೆದು ಹೋಗಿರುವ ತನ್ನ ಇಮೇಜನ್ನು ದಿಢೀರ್ ಎಂದು ಪ್ರತಿಷ್ಠಾಪಿಸಲು ಹೆಣಗಿ ಮಣ್ಣುಮುಕ್ಕಿದ ಜೆಡಿಎಸ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಷ್ಟೇ ವೇಗವಾಗಿ ಬಿಜೆಪಿ ಸಖ್ಯಕ್ಕಾಗಿ ಆಸೆ ಪಟ್ಟಿದೆ. ಇದಕ್ಕೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಹೆಚ್.ಡಿ.ದೇವೇಗೌಡರ ನಡೆಯೇ ಸಾಕ್ಷಿ.
ಮತ್ತೊಂದೆಡೆ ಉಪಚುನಾವಣೆ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ತನ್ನದೇ ಚಾರ್ಮ್ ಹೊಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ನೆರವು ಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲೇ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಿಕೊಂಡ ಕಾಂಗ್ರೆಸ್,ಬದಲಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ,ಕೋನಾರೆಡ್ಡಿರಂತಹವರು ಮತ್ತು ಅವರ ಬೆಂಬಲಿಗರ ನೆರವು ಪಡೆದು ಸಲೀಮ್ ಅಹಮದ್ ಅವರನ್ನು ಗೆಲ್ಲಿಸುವ ಮೂಲಕ ಮುಸ್ಲಿಂ ನಾಯಕನನ್ನು ರಾಜಕೀಯ ಅಧಿಕಾರಿದಲ್ಲಿ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದೆ.
ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಾಠ ಕಲಿಸುವ ಭರದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರಚಂಡ ಗೆಲುವಿಗೆ ಕಾರಣವಾದ ಜೆಡಿಎಸ್ ಗೆ ಇಂತಹ ತಂತ್ರಗಳು ಅಥವಾ ರಾಜಕೀಯ ಚತುರತೆ ಮೆರೆಯಲು ಯಾಕೆ ಆಗಲಿಲ್ಲ ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಮನಸ್ಸಿದ್ದರೆ ಮಾರ್ಗ ಎಂಬಂತೆ ಕೇವಲ ಇನ್ನೊಬ್ಬರನ್ನು ಹಣೆಯುವ ರಾಜಕೀಯ ತಂತ್ರಗಳಿಗೆ ಮೊರೆ ಹೋಗುವ ಬದಲು ಇಚ್ಚಾಶಕ್ತಿಯನ್ನು ಮೆರೆದು ಇರುವ ನಾಯಕರನ್ನು ಉಳಿಸುವ, ಬೆಳೆಸುವ ಎಲ್ಲಾ ಜನಸಮುದಾಯಗಳಲ್ಲಿ ಹೊಸ ನಾಯಕತ್ವ ಹುಟ್ಟು ಹಾಕುವ ತಂತ್ರಕ್ಕೆ ಮೊರೆ ಹೋಗಬೇಕಿದೆ. ಅದಕ್ಕಾಗಿ ಮುಸ್ಲಿಮರೂ ಸೇರಿದಂತೆ ಎಲ್ಲ ಜನಸಮುದಾಯಗಳ ಬಗ್ಗೆ ನಿರಂತರವಾಗಿ ರಚನಾತ್ಮಕ ಕಾರ್ಯಕ್ರಮ, ಹೋರಾಟಗಳ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಜೆಡಿಎಸ್ ಇನ್ನಾದರೂ ಅಣಿಯಾಗಲೇಬೇಕಿದೆ.
ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್, ಮಿರಾಜುದ್ದೀನ್ ಪಟೇಲ್, ಅಬ್ದುಲ್ ಅಜೀಮ್, ರೋಷನ್ ಬೇಗ್, ಖಮರುಲ್ ಇಸ್ಲಾಂರಂತಹ ನಾಯಕರಿಗೆ ಅವಕಾಶ ನೀಡಿ ಬೆಳೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರಂಪರೆಯನ್ನು ಕುಮಾರಸ್ವಾಮಿಯವರೂ ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕಿದೆ.
ಇದು ಕೇವಲ ಮುಸ್ಲಿಮರಿಗೆ ಸೀಮಿತವಾದ ವಿಷಯವಲ್ಲ. ಎಲ್ಲ ಜಾತಿ ಜನಾಂಗದವರಿಗೆ ಸಮಾನ ಆದ್ಯತೆ ನೀಡಿ ಪಕ್ಷ ಅವರ ಪರವಾಗಿ ನಿಂತಿದೆ ಎಂಬ ವಿಶ್ವಾಸ ಮೂಡಿದಾಗ ಹೆಸರಿಗೆ ತಕ್ಕಂತೆ ಜಾತ್ಯಾತೀತ ಜನತಾದಳದ ಅಸ್ತಿತ್ವ ಉಳಿಯಲು ಸಾಧ್ಯ. ಒಮ್ಮೆ ಮುಸ್ಲಿಮರ ಪರ, ಮಗದೊಮ್ಮೆ ಬಿಜೆಪಿಗೆ ಹಿತವಾಗುವ ನಿಲುವುಗಳನ್ನು ತಾಳಿದರೆ ಇಬ್ಬರೂ ಜೆಡಿಎಸ್ ನ್ನು ನಂಬುವುದಿಲ್ಲ. ಅಂತಹದ್ದೊಂದು ಸನ್ನಿವೇಶದ ಪರಿಣಾಮವನ್ನು ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಎದುರಿಸುತ್ತಿದೆ ಎಂಬುದು ನಿಸ್ಸಂಶಯ.
ಒಟ್ಟಾರೆ, ಅಧಿಕಾರ ಎಂಬುದು ಕೇವಲ ಒಂದು ಕುಟುಂಬಕ್ಕೆ ಸೀಮಿತ ಅಥವಾ ಅವರ ಹಿಡಿತಕ್ಕೆ ಸಿಲುಕದೇ, ನಿಲುಕದೇ ಎಲ್ಲರಿಗೂ ದಕ್ಕುವಂತಾಗಬೇಕು. ಈ ಸವಾಲನ್ನು ಜೆಡಿಎಸ್ ಸ್ವೀಕರಿಸುವುದೇ ? ತನ್ನ ಮಿತಿಗಳನ್ನು ಮೀರುವುದೇ ? ಸಾಮೂಹಿಕ ನಾಯಕತ್ವ ಬೆಳೆಸುವುದೇ ? ವಿಶಾಲದೃಷ್ಟಿಯ ಹೊಸ ಪಕ್ಷವಾಗಿ ಹೊರಹೊಮ್ಮುವುದೇ ? ಕಾಲಾಯ ತಸ್ಮಯೇ ನಮಃ



