
ಎಂ ಹೈದರ್
ಲಕ್ನೋ : ಉತ್ತರ ಪ್ರದೇಶದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆದು ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದು ಆದಿತ್ಯ ನಾಥ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ತಳಮಟ್ಟದಲ್ಲಿ ವ್ಯಾಪಕವಾಗಿರುವುದು ಗೋಚರವಾಗಿತ್ತು.
ಇದೀಗ ಕರ್ನಾಟಕದ ತಾಲೂಕು ಪಂಚಾಯಿತಿಯಂತೆ ಬ್ಲಾಕ್ ಮಟ್ಟದ ಅಧ್ಯಕ್ಷರನ್ನು ಚುನಾಯಿಸಲಾಗುವ ಸ್ಥಳೀಯ ಸಂಸ್ಥೆಯ ಅಧ್ಯಕ್ಷರುಗಳ ಚುನಾವಣೆ ಶನಿವಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಜಾತಂತ್ರವನ್ನು ಅಣಕಿಸುವ ಹಲವು ರೀತಿಯ ಅಕ್ರಮಗಳು ಬಿಜೆಪಿಯ ರಾಮರಾಜ್ಯದಲ್ಲಿ ನಡೆದಿವೆ. ಅದರಲ್ಲೂ ಅಯೋಧ್ಯಾ, ಹಾತ್ರಸ್, ಉನ್ನಾವೋ, ಚಂದೋಲಿ, ಇಟಾವಾ, ಅಮೀರ್ ಪುರ್, ಅಮರೋಹ ಗಳಲ್ಲಿ ವ್ಯಾಪಕವಾಗಿ ಹಿಂಸಾಚಾರ ಮತ್ತು ಘರ್ಷಣೆಗಳು ನಡೆದಿವೆ.
ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ 825 ಬ್ಲಾಕ್ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ 349 ಬ್ಲಾಕ್ ಪಂಚಾಯತ್ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲಾಗಿದೆ. ಉಳಿದ 476 ಬ್ಲಾಕ್ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ನಿನ್ನೆ ಎಗ್ಗಿಲ್ಲದಂತೆ ಅಕ್ರಮ ಮತ್ತು ಹಿಂಸಾಚಾರ ನಡೆದಿದೆ. ಕಳೆದ ವಾರ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿನ ಬಿಜೆಪಿಯ ಗೆಲುವು ಕೂಡ ಇಂತಹ ಅಕ್ರಮಗಳ ಫಲಿತಾಂಶವೆ ಆಗಿತ್ತು.
ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ, ಬೆದರಿಕೆ, ವಾಹನಗಳ ಜಕಂ, ಅಪಹರಣ ಇತ್ಯಾದಿ ವಿವಿಧ ಪ್ರಕರಣಗಳು ನಡೆದಿವೆ ಇಟಾವಾದಲ್ಲಿ ಪ್ರಶಾಂತ್ ಕುಮಾರ್ ಎಂಬ ಪೋಲಿಸ್ ಅಧಿಕಾರಿಯೊಬ್ಬರು ನನಗೆ ಬಿಜೆಪಿ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೇಲಧಿಕಾರಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಬ್ಲಾಕ್ ಪಂಚಾಯತ್ ಅಧ್ಯಕ್ಷರನ್ನು ಚುನಾಯಿಸಲು ಬಂದ BDC ಸದಸ್ಯರುಗಳನ್ನು ತಡೆದು ಮತದಾನ ಮಾಡದಂತೆ ಬೆದರಿಕೆ ಒಡ್ಡುತ್ತಿದ್ದ ಎದುರಾಳಿ ಪಕ್ಷದ ಕಾರ್ಯಕರ್ತರ ಗೂಂಡಾವರ್ತನೆಯನ್ನು ಚಿತ್ರಿಕರಿಸುತ್ತಿದ್ದ ಟಿವಿ ಪತ್ರಕರ್ತ ಕೃಷ್ಣ ತಿವಾರಿಯವರನ್ನು ಅಟ್ಟಾಡಿಸಿ ಹೊಡೆದು ಅವರ ಮೊಬೈಲ್ ಜಕಂಗೊಳಿಸಲಾಗಿದೆ. ಅಲ್ಲದೇ ದಿವ್ಯಾಂಶು ಪಟೇಲ್ ಎಂಬ ಐಎಎಸ್ ಅಧಿಕಾರಿಯು ಕೂಡ ಈ ಗೂಂಡಾಗಳ ಜೊತೆ ಸೇರಿ ಕೃಷ್ಣ ತಿವಾರಿಯನ್ನು ಹೊಡೆಯುತ್ತಿರುವ ದೃಶ್ಯ ಕೂಡ ಇದರಲ್ಲಿದೆ.
ಕಬೀರ್ ನಗರದಲ್ಲಿ ತಂದೆಯ ಶವಯಾತ್ರೆಯಲ್ಲಿ ಸಾಗುತ್ತಿದ್ದ ಸ್ಥಳೀಯ ಪ್ರತಿನಿಧಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಹರಿಸಿದ್ದಾರೆ. ಸಮಾಜವಾದಿ ಪಕ್ಷದ ಬೆಂಬಲಿತ ಮಹಿಳಾ ಅಭ್ಯರ್ಥಿಯನ್ನು ಅಪಹರಿಸಲು ಯತ್ನಿಸಿದ ಗೂಂಡಾಗಳನ್ನು ತಡೆದ BDC ಸದಸ್ಯೆಯೊಬ್ಬರ ಸಂಬಂಧಿಯೊಬ್ಬರನ್ನು ಶುಕ್ರವಾರ ಹತ್ಯೆ ಮಾಡಲಾಗಿದೆ. ಲಕ್ನೋದ ಹೋಟೆಲೊಂದರಲ್ಲಿ ಸುಮಾರು 30, BDC ಸದಸ್ಯರನ್ನು ದಿಗ್ಬಂದನದಲ್ಲಿಡಲಾದ ವಿಡಿಯೋವೊಂದು ಶುಕ್ರವಾರ ವೈರಲ್ ಆಗಿತ್ತು.
ಲಕ್ನೋದಿಂದ 130 ಕಿಲೋಮೀಟರ್ ದೂರದಲ್ಲಿನ ಲಖೀಂಪುರ ಖೇರಿ ಎಂಬಲ್ಲಿ. ಸಮಾಜವಾದಿ ಪಕ್ಷದ ಪಂಚಾಯತ್ ಅಭ್ಯರ್ಥಿಯೊಬ್ಬರ ನಾಮಪತ್ರ ಸೂಚಕರಾಗಿ ಆಗಮಿಸಿದ್ದ ಮಹಿಳಾ ಕಾರ್ಯಕರ್ತೆಯನ್ನು ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಸೀರೆ ಹಿಡಿದು ಎಳೆದಾಡಿದಲ್ಲದೆ, ನಾಮಪತ್ರ ಸಲ್ಲಿಸದಂತೆ ಮಹಿಳಾ ಅಭ್ಯರ್ಥಿಯ ಕೈಯಿಂದ ನಾಮಪತ್ರ ಕಸಿದುಕೊಳ್ಳುತ್ತಿರುವ ದೃಶ್ಯವೂ ಎದುರಾಳಿ ಪಕ್ಷದ ಕಾರ್ಯಕರ್ತರಿಂದ ನಡೆದಿದೆ.
ಮಹಿಳೆಯನ್ನು ಎಳೆದಾಡಿರುವ ಪ್ರಕರಣದಲ್ಲಿ ಹಿಂದಿ ಮಾಧ್ಯಮವೊಂದರ ಪತ್ರಕರ್ತನು ಶಾಮೀಲಾಗಿರುವ ಬಗೆಗಿನ ವೀಡಿಯೋ ಕೂಡ ವೈರಲ್ ಆಗಿದೆ. ಆಡಳಿತಾರೂಢ ಪಕ್ಷದ ಅಭ್ಯರ್ಥಿಯ ಕಡೆಯವರು ತಮ್ಮ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವ ಪ್ರಯತ್ನವಾಗಿ ಅವರು ಅಪಹರಣ, ಬೆದರಿಕೆ, ಕೊಲೆ, ಹಿಂಸಾಚಾರದ ಮೂಲಕ ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಎಂದು ಎಸ್ಪಿ, ಮತ್ತು ಕಾಂಗ್ರೆಸ್ ಆರೋಪಿಸುತ್ತಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳಲ್ಲಿ ತೊಡಗಿರುವ ದಾಳಿಕೋರರು ಬಿಜೆಪಿ ಕಾರ್ಯಕರ್ತರು ಆದಿತ್ಯನಾಥ್ ಅವರ ಕಡೆಯ ಗೂಂಡಾಗಳು ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಸುಮಾರು 17 ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಮತದಾನ ಕೇಂದ್ರಕ್ಕೆ BDC ಸದಸ್ಯರುಗಳನ್ನು ಬರದಂತೆ ತಡೆಯಲಾಗಿದೆ ಇದೆಲ್ಲವೂ ಆಡಳಿತದಲ್ಲಿನ ಬಿಜೆಪಿ ನಡೆಸುತ್ತಿದೆ, ಎಂದು ಎಸ್ಪಿ, ಕಾಂಗ್ರೆಸ್ ಮತ್ತು ಬಿಎಸ್ಸಿಗಳು ಆರೋಪಿಸಿವೆ.
ಉತ್ತರ ಪ್ರದೇಶದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಸೋಲಿನ ನಂತರ ಎಚ್ಚೆತ್ತುಕೊಂಡ ಬಿಜೆಪಿ ಮುಂದಿನ ವರ್ಷದ ವಿಧಾನಸಭೆಯ ಚುನಾವಣೆಯನ್ನು ಗಮನದಲ್ಲಿಟ್ಟು ಬಿಜೆಪಿ ಮತ್ತು ಆರ್ ಎಸ್ಎಸ್ ಉತ್ತರ ಪ್ರದೇಶದಲ್ಲಿ ಚುನಾವಣಾ ಸಮೀಕ್ಷೆಯನ್ನು ತಾನೇ ನಡೆಸಿ ಮತದಾರರ ಮನದಾಳವನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿಗೆ ಮುಂದಿನ ವರ್ಷದ ಚುನಾವಣೆಯಲ್ಲಿ ಉತ್ತರ ಪ್ರದೇಶದ 403 ಸ್ಥಾನಗಳಲ್ಲಿ 100 ಸ್ಥಾನಗಳನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ ಎಂಬ ಆಘಾತಕಾರಿ ಮಾಹಿತಿ ಬಿಜೆಪಿಗೆ ದೊರಕಿತ್ತು.
ಇದರಿಂದ ಅಕ್ಷರಶಃ ಕಂಗೆಟ್ಟ ಬಿಜೆಪಿ ಮತ್ತು ಸಂಘಪರಿವಾರ, ಮುಂದಿನ ವರ್ಷದ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟು ಈಗ ಎಲ್ಲ ರೀತಿಯ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಬಲಪ್ರಯೋಗದ ಮೂಲಕ ಸರ್ಕಾರದ ಶಕ್ತಿ ಮತ್ತು ತಮ್ಮ ಪಡೆಗಳ ಬಲವನ್ನು ಬಳಸಿಕೊಂಡು ಪ್ರತಿಸ್ಪರ್ಧಿಗಳನ್ನು ಇನ್ನಿಲ್ಲದಂತೆ ಹಣಿದು ಸ್ಥಳೀಯ ಮಟ್ಟದಲ್ಲಿ ಅಧಿಕಾರ ಕೈ ತಪ್ಪದಂತೆ ಮಾಡಿ ವಿಧಾನಸಭೆಯ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ವೇದಿಕೆ ಸಿದ್ದಪಡಿಸಿಕೊಂಡಿದೆ.
ನಿನ್ನೆ ನಡೆದ ಸ್ಥಳೀಯ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಆಡಳಿತಾರೂಡ ಬಿಜೆಪಿಯ ಕಾರ್ಯಕರ್ತರು, ಕೊಲೆ, ಅಪಹರಣ, ಮಹಿಳೆಯ ವಸ್ತ್ರಾಪಹರಣದಂತಹ ತೀರಾ ವಿನಾಶಕಾರಿ ಕೃತ್ಯಗಳಿಗಿಳಿದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆರೋಪಗಳು ಕೇಳಿಬಂದಿವೆ.
ಚುನಾವಣೆಯಲ್ಲಿ ಇಂತಹ ಪ್ರಜಾಪ್ರಭುತ್ವಘಾತಕ ಕೃತ್ಯಗಳು ನಡೆದರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಮಾತ್ರ “ಚುಣಾವಣೆಯು ಶಾಂತಿಯುತ ರೀತಿಯಾಗಿ ನಡೆದು ಸಂಪನ್ನವಾಗಿದೆ” ಎಂದು ಹೇಳಿಕೆ ನೀಡಿ ಅವರ ನಿರ್ಜೀವ ಭಕ್ತ ಆತ್ಮಗಳನ್ನು ತಣಿಸಿದ್ದಾರೆ, ಇದಕ್ಕೆ ಅವರ ಭಕ್ತ ಮೀಡಿಯಾಗಳು ಎಂದಿನಂತೆ ಮಾಸ್ಟರ್ ಸ್ಟ್ರೋಕ್ ಮಂತ್ರ ಪಠಿಸಬಹುದು.
ಆಡಳಿತಾರೂಢ ಬಿಜೆಪಿಗೆ, ಎಸ್ಪಿ, ಕಾಂಗ್ರೆಸ್ , ಮತ್ತು ಬಿಎಸ್ಪಿ ಸೇರಿದಂತೆ AIMIM ಕೂಡ ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಕಣದಲ್ಲಿ ಅನುಕೂಲಕರ ಪ್ರದರ್ಶನ ನೀಡಲಿದ್ದು ಅದರಲ್ಲೂ AIMIM ನ ಅಸಾದುದ್ದಿನ್ ಓವೈಸಿಯನ್ನು ಪ್ರಭುತ್ವ ನಿಷ್ಠ ಮೀಡಿಯಾಗಳು ಈಗಾಗಲೆ ಮೆರವಣಿಗೆ ಮಾಡುತ್ತಿವೆ. ಆದರೂ ಉತ್ತರ ಪ್ರದೇಶದ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಈ ಮಟ್ಟದ ಭಯ ಕಾಡುತ್ತಿರುವುದು ಅದರ ಆಡಳಿತದ ವೈಫಲ್ಯ ಎಷ್ಟು ಘೋರ ಎಂಬುವುದಕ್ಕೆ ಹಿಡಿದ ಕನ್ನಡಿಯಾಗಿದೆ.



