
ಬೆಂಗಳೂರು : ನಾನು ಸೇರಿದಂತೆ ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೇಸ್‌ಗಳಿಗೆಲ್ಲ ನಾವು ಹೆದರುವುದಿಲ್ಲ. ಕೊರೊನಾ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿಗಳು ಸೇರಿ ಬಿಜೆಪಿಯವರ ಮೇಲೂ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೇಸ್‌ಗಳಿಗೆಲ್ಲ ನಾವು ಹೆದರುವುದಿಲ್ಲ. ಕೊರೊನಾ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿಗಳು ಸೇರಿ ಬಿಜೆಪಿಯವರ ಮೇಲೂ ಏಕೆ ಪ್ರಕರಣ ದಾಖಲಿಸಿಲ್ಲ? ಇದರಿಂದ ಸರ್ಕಾರದ ದುರುದ್ದೇಶ ಸ್ಪಷ್ಟವಾಗುತ್ತದೆ. ಅದರೆ ನಮ್ಮ ಪಾದಯಾತ್ರೆ ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಮೇಕೆದಾಟು ಪಾದಯಾತ್ರೆ ನಡೆಸುವ ಕುರಿತಾಗಿ ಕಾಂಗ್ರೆಸ್ ನಾಯಕರ ವಿರದ್ಧ ಹೈಕೋರ್ಟ್ ಗರಂ ಆಗಿದ್ದು, ರಾಜ್ಯ ಸರ್ಕಾರ ಈ ಪಾದಯಾತ್ರೆಯನ್ನು ತಡಯಲು ಏಕೆ ಸಾಧ್ಯವಾಗಿಲ್ಲ ಎಂದು ಚಾಟಿ ಬೀಸಿದೆ. ಆದರೆ, ಹೈಕೋರ್ಟ್ ಪಾದಯಾತ್ರೆಯನ್ನು ನಿಲ್ಲಿಸಲು ಸೂಚಿಸಿದರೇ ಪಾದಯಾತ್ರೆಯನ್ನು ನಿಲ್ಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ, ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ, ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತಿದ್ದೇವೆ . ಹೈಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ಕೇಳಿರುವ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ. ಸರ್ಕಾರಕ್ಕೆ ಕೇಳಿರುವ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಲಿ ಎಂದರು.
ಇನ್ನೂ ಕೋರ್ಟ್ ಅನುಮತಿಯನ್ನು ಪಡೆದು ಯಾರು ಪ್ರತಿಭಟನೆ, ಹೋರಾಟಗಳನ್ನು ಮಾಡುವುದಿಲ್ಲ. ನಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಉತ್ತರಿಸುತ್ತೇವೆ. ನಮ್ಮ ಪಾದಯಾತ್ರೆ ಹೋರಾಟದಿಂದ ಕೋವಿಡ್ 19 ಜಾಸ್ತಿ ಆಗ್ತಿಲ್ಲ. ಸರ್ಕಾರದ ಉದಾಸೀನತೆಯಿಂದ, ಬೇಜವ್ದಾಯಿಂದ ಜಾಸ್ತಿ ಆಗಿದೆಯೇ ಹೊರತು ನಮ್ಮಿಂದಲ್ಲ. ಕೋವಿಡ್ 19ರ ಎಲ್ಲಾ ನಿಯಮಾವಳಿಗಳನ್ನು ಪಾಲಿಸುತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.



