ಒಕ್ಕಲಿಗರ ಸಂಘದ ಚುನಾವಣೆ; 15 ಸ್ಥಾನಕ್ಕೆ 141 ಮಂದಿ ಕಣಕ್ಕೆ

ರಾಮನಗರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಅಂತಿಮ ಹುರಿಯಾಳುಗಳ ಪಟ್ಟಿ ಸಿದ್ದಗೊಂಡಿದ್ದು, ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಕ್ರಿಯ ಪೂರ್ಣಗೊಂಡ ಬಳಿಕ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಕ್ಷೇತ್ರದಿಂದ ೧೫ ಸ್ಥಾನಕ್ಕೆ ಆಯ್ಕೆ ಬಯಸಿ ೧೪೧ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ೧೪೧ ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದ ೧೫೩ ಮಂದಿ ಅಭ್ಯರ್ಥಿಗಳ ಪೈಕಿ ೧೨ ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ ೧೪೧ ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.
ಈಗಾಗಲೇ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ಹಂಚಿಕೆ ಮಾಡಿದ್ದು, ಚುನಾವಣಾ ಅಧಿಕಾರಿಗಳು ಇದೀಗ ಮತಪತ್ರ ಸಿದ್ದಪಡಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಬೆಂಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ೧.೯೭ ಲಕ್ಷ ಮತದಾರರು ಇದ್ದು, ಪ್ರತಿ ತಾಲೂಕು ಕೇಂದ್ರದಲ್ಲಿ ಮತದಾನ ಕೇಂದ್ರ ಸ್ಥಾಪಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಪ್ರತಿ ೫೦೦ ಮಂದಿ ಮತದಾರರಿಗೆ ಒಂದು ಮತದಾನ ಕೇಂದ್ರ ಸ್ಥಾಪಿಸಲು ಚುನಾವಣಾ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು, ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಸಲು ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರು ನಗರದಲ್ಲಿ ಪಿನ್‌ಕೋಡ್ ನಂಬರ್‌ಗೆ ಅನುಸಾರವಾಗಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗುವುದು. ಡಿ. ೩ ರೊಳಗೆ ಗುರುತಿನ ಪತ್ರ ಪಡೆಯಿರಿ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕೆ ಸಂಘದ ಗುರುತಿನ ಪತ್ರ ಕಡ್ಡಾಯವಾಗಿದ್ದು, ಗುರುತಿನ ಪತ್ರ ಪಡೆಯದ ಸದಸ್ಯರು ಡಿ.೩ ಒಳಗೆ ಗುರುತಿನ ಪತ್ರವನ್ನು ಸಂಘದ ಕಚೇರಿಯಲ್ಲಿ ಪಡೆದು ಕೊಳ್ಳ ಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಡಿ.೧೫ಕ್ಕೆ ಮತ ಏಣಿಕೆ:
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಿ.೧೨ಕ್ಕೆ ನಡೆಯಲಿದ್ದು, ಮತಗಟ್ಟೆಗಳನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಮತ ಏಣಿಕೆ ಕೇಂದ್ರಕ್ಕೆ ತರಲಾಗುವುದು. ಮತಗಟ್ಟೆ ಕೇಂದ್ರದಲ್ಲಿ ಡಿ.೧೫ ರಂದು ಮತ ಏಣಿಕೆ ನಡೆಯಲಿದೆ.
ರಾಜ್ಯಾದ್ಯಂತ ೨೨೧ ಅಭ್ಯರ್ಥಿಗಳು:
ರಾಜ್ಯದ ೧೩ ಜಿಲ್ಲೆಗಳ ವ್ಯಾಪ್ತಿಯ ೩೫ ನಿರ್ದೇಶಕ ಸ್ಥಾನಕ್ಕೆ ೨೨೧ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಅಭ್ಯರ್ಥಿಗಳ ಹಣೆ ಬರಹವನ್ನು ೫.೨೦ ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ಮತದಾನಕ್ಕಾಗಿ ರಾಜ್ಯಾದ್ಯಂತ ೧೦೪೯ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು- ಚಾಮರಾಜನಗರ-೯, ಮಂಡ್ಯ-೧೬, ಹಾಸನ-೧೧, ತುಮಕೂರು-೭ ಚಿತ್ರದುರ್ಗ-೫, ಕೋಲಾರ-ಚಿಕ್ಕಬಳ್ಳಾಪುರ-೧೨, ದಕ್ಷಿಣಕನ್ನಡ-ಉಡುಪಿ-೩, ಶಿವಮೊಗ್ಗ-೯, ಕೊಡಗು-೪, ಚಿಕ್ಕಮಗಳೂರು-೪ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
