ಗೋಕರ್ಣಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಪ್ರವಾಸಿಗರ ದಂಡು

ಕಾರವಾರ : ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದರೂ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನು ಕೆಲ ತಾಸುಗಳಲ್ಲಿ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಈಗಾಗಲೇ ಜಿಲ್ಲೆಯ ಗೋಕರ್ಣ ಮತ್ತು ಮುರ್ಡೇಶ್ವರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಸಜ್ಜಾಗಿದ್ದಾರೆ. ಈಗಾಗಲೇ ಇಲ್ಲಿಯ ಹೆಚ್ಚಿನ ಲಾಡ್ಜಗಳು ಮುಂಗಡವಾಗಿ ಬುಕ್ಕಿಂಗ್ ಆಗಿದ್ದು, ಇನ್ನು ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆ. ಪ್ರವಾಸಿಗರ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡ ಹಿನ್ನೆಲೆಯಲ್ಲಿ ರೂಮಿನ ದರವೂ ದುಪ್ಪಟ್ಟಾಗಿದೆ.
ಒಮಿಕ್ರಾನ್ ಭಯದಲ್ಲಿರುವ ಸರಕಾರ ಮತ್ತು ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಪ್ರವಾಸಿಗರು ಮಾತ್ರ ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನೈಟ್ ಕರ್ಪ್ಯೂ ವಿಧಿಸಿರುವುದರಿಂದ ಮಧ್ಯ ದಂಗಡಿಗಳಲ್ಲಿ ಗ್ರಾಹಕರು ಮುತ್ತಿಗೆ ಹಾಕಿ ಮದ್ಯ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಕಡಲ ತೀರಗಳಲ್ಲಿ ಬಹಿರಂಗವಾಗಿ ಪಾರ್ಟಿ ಆಯೋಜಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವ ಪೊಲೀಸ್ ಇಲಾಖೆ ಡಿಜೆ ಹಚ್ಚಿ ಸಂಭ್ರಮಿಸುವುದನ್ನು ಕೂಡ ನಿಷೇಧಿಸಿದೆ. ಈ ಕುರಿತಾಗಿ ಲಾಡ್ಜ್ ಮತ್ತು ರೆಸಾರ್ಟ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದೆ. ಗ್ರಾಹಕರಿಂದ ತುಂಬಿ ತುಳುಕುತ್ತಿರುವ ಹೊಟೇಲ್ ಮತ್ತು ರೆಸಾರ್ಟ್ ಗಳಲ್ಲಿ ಆಹಾರಗಳ ಬೆಲೆ ಗಗನ ಮುಖಿಯಾಗಿ ಏರಿಕೆ ಕಂಡಿದೆ. ಇನ್ನು ಕಡಲ ತೀರಗಳಲ್ಲಿ ಮಾದಕ ಪದಾರ್ಥಗಳ ಸಾಗಾಟವೂ ಎಗ್ಗಿಲ್ಲದೇ ನಡೆಯುತ್ತಿದೆ.
ಹೊಸವರ್ಷದ ಸಂಭ್ರಮಾಚರಣೆಗೆ ಗೋವಾ, ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣ,ದೆಹಲಿ,ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರ ದಂಡು ಸಾಗರೋಪಾದಿಯಲ್ಲಿ ಹರಿದು ಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಸಹ ಕಡಲ ತೀರಗಳಲ್ಲಿ ಜಮಾಯಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವ ಜೋಡಿಗಳಾಗಿರುವುದೇ ವಿಶೇಷವಾಗಿದೆ.



