ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನಲ್ಲಿ ಶರಣಾಗತಿ

ಚಿಕ್ಕಮಗಳೂರು: ಮಲೆನಾಡಿನ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಇತ್ತೀಚೆಗೆ ಕೇರಳದಲ್ಲಿ ಶರಣಾಗತಿಯಾಗಿರುವ ಬೆನ್ನಲ್ಲೇ ಅವರ ಸಂಗಾತಿಯಾಗಿದ್ದ ಹೊಸಗದ್ದೆ ಪ್ರಭಾ ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರಿಗೆ ಶರಣಾಗಿರುವುದು ವರದಿಯಾಗಿದೆ.
ತಮಿಳುನಾಡಿನ ವೆಲ್ಲೂರು ಪೊಲೀಸ್ ಮುಂದೆ ಶರಣಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದು, ಮಲೆನಾಡಿನ ಪ್ರಮುಖ ನಕ್ಸಲ್ ಕೊಂಡಿಯೊಂದು ಕಳಚಿದಂತಾಗಿದೆ. ಈಕೆಯ ಮೇಲೆ 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಆಗುಂಬೆ ಸಮೀಪದ ಹೊಸಗದ್ದೆಯಲ್ಲಿ ಕಳೆದ 2000ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಕಾಡು ಸೇರಿದ್ದ ಪ್ರಭಾ ಮುಖ್ಯವಾಹಿನಿಗೆ ಬರಲೇ ಇಲ್ಲ. 1998ರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲಿ ಶಿವಮೊಗ್ಗದ ಮಹಿಳಾ ಜಾಗೃತಿ ಸಂಘಟನೆಯಲ್ಲಿ ಗುರುತಿಸಿಕೊಂಡು ನಂತರ ಶೃಂಗೇರಿಯಲ್ಲಿ ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಂತರದ ದಿನಗಳಲ್ಲಿ ಮಲೆನಾಡಿನ ಜಿಲ್ಲೆಗಳಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡರೂ ಹೊಸಗದ್ದೆ ಪ್ರಭಾ ಹೆಸರು ಮೊದಲು ಕೇಳಿಬರುತ್ತಿತ್ತು. ಅಲ್ಲದೆ ಈಕೆಯ ವಿರುದ್ಧ ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿದ್ದವು.
ಪ್ರಭಾ, ಸಂಧ್ಯಾ, ನೇತ್ರ, ಮಧು ಹೀಗೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದ್ದ ಈ ನಕ್ಸಲ್ ನಾಯಕಿಯ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ ಕೊಡುವುದಾಗಿ ಸರ್ಕಾರ ಘೊಷಿಸಿತ್ತು. ಈ ಮಧ್ಯೆ 2010ರಲ್ಲಿ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿಯೂ ಆಕೆಯ ಅಂತ್ಯಸಂಸ್ಕಾರ ನಡೆದಿದೆ ಎಂದು ಹೇಳಲಾಗಿತ್ತು. ಈಗ ಅದೆಲ್ಲಾ ಊಹಾಪೋಹ ಎಂಬುದು ಗೊತ್ತಾಗಿದೆ.
ಮಲೆನಾಡಿನಲ್ಲಿ ಪ್ರಭಾವಿ ನಕ್ಸಲ್ ನಾಯಕಿಯಾಗಿದ್ದ ಪ್ರಭಾ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಚಟುವಟಿಕೆ ಕುಗ್ಗತೊಡಗಿದಾಗ ತನ್ನ ಕಾರ್ಯಕ್ಷೇತ್ರವನ್ನು ತಮಿಳುನಾಡಿಗೆ ವಿಸ್ತರಣೆ ಮಾಡಿಕೊಂಡಿರಬಹುದೆಂದು ತಿಳಿಯಲಾಗಿದೆ. ಇತ್ತೀಚೆಗಷ್ಟೇ ಕೇರಳ ಪೊಲೀಸರಿಗೆ ನಕ್ಸಲ್ ಅಗ್ರನಾಯಕ ಬಿ ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಶರಣಾಗಿದ್ದರು.
