ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ

ಬೆಳಗಾವಿ: ಬೆಳಗಾವಿಯ ಅನಗೊಳದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದರು.
ಆನೆಗೋಳದ ಕನಕದಾಸ ಕಾಲೋನಿಗೆ ಭೇಟಿ ನೀಡಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಕುರಿತು ಮಾಹಿತಿ ಪಡೆದರು. ಜತೆಗೆ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಎಂ ಇ ಎಸ್ ಪುಂಡರಿಗೆ ನೆಲದ ಕಾನೂನಿನ ಮೇಲೆ ಗೌರವ ಇಲ್ಲ. ಪ್ರಕರಣಕ್ಕೆ ಸಂಬಂಧ ಸರ್ಕಾರದ ವೈಫಲ್ಯವಿದೆ. ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಆರೋಪಿಸಿದರು.
ಎಂಇಎಸ್ ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕು ಎಂಬುದು ಜನರ ಒತ್ತಾಯವಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಅನ್ನೋದು ಸತ್ತು ಹೋಗಿದೆ ಎಂದು ದೂರಿದರು.
ಆಡಳಿತದ ಮೇಲೆ ಈ ಸರ್ಕಾರಕ್ಕೆ ಹಿಡಿತ ಇಲ್ಲ ಎಂದೂ ಸಿದ್ದರಾಮಯ್ಯ ಹೇಳಿದರು.
