ಮೈಸೂರಿನ ಮೈಲ್ಯಾಕ್ ನಿಂದ ಪಂಚರಾಜ್ಯ ಚುನಾವಣೆಗೆ ಇಂಕ್ ಬಾಟಲ್ ರವಾನೆ

ಮೈಸೂರು : ಯಾವುದೇ ಚುನಾವಣೆ ನಡೆದರೂ ಮೈಸೂರಿನ ಮೈಲ್ಯಾಕ್ ಕಂಪನಿ ಇಂಕ್ ಗೆ ಬಾರೀ ಬೇಡಿಕೆ ಇದೆ. ಅಂತೆಯೇ ಈಗ ಪಂಚ ರಾಜ್ಯ ಚುನಾವಣೆಗೆ ಮೈಸೂರಿನ ಮೈಲ್ಯಾಕ್ ಕಂಪನಿಯಿಂದ 5 ಲಕ್ಷ ಇಂಕ್ ಬಾಟಲ್ಗಳನ್ನು ಆಯಾ ರಾಜ್ಯಗಳ ಚುನಾವಣಾ ಆಯೋಗದ ಕೋರಿಕೆ ಮೇಲೆ ಕಳುಹಿಸಲಾಗಿದೆ.
ಚುನಾವಣೆಗೆ ಅಗತ್ಯವಿರುವ ಅಳಿಸಲಾಗದ ಶಾಯಿ ಅನ್ನು ಮೈಸೂರಿನ ಮೈಲ್ಯಾಕ್ನಿಂದ ಸರಬರಾಜು ಮಾಡಲಾಗುತ್ತದೆ. ಆದ್ದರಿಂದಾಗಿ ಇದು ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಈ ವರ್ಷ ದೇಶದಲ್ಲಿ ನಡೆಯುತ್ತಿರುವ 5 ರಾಜ್ಯಗಳಿಗೂ ಪೂರೈಸಲಾಗಿದೆ. ಕಳೆದ ನವೆಂಬರ್ನಿಂದಲೇ ಆಯಾ ರಾಜ್ಯಗಳ ಚುನಾವಣೆ ಆಯೋಗದಿಂದ ಇಂಕ್ ಬಾಟಲ್ಗಳಿಗೆ ಬೇಡಿಕೆ ಇಟ್ಟಿದ್ದರು. ಅದರ ಅನ್ವಯ ಉತ್ತರ ಪ್ರದೇಶದಿಂದ 10 ಸಿಸಿ ಯ 4 ಲಕ್ಷ ಬಾಟಲ್, ಪಂಜಾಬ್ ಗೆ 62 ಸಾವಿರ ಬಾಟಲ್, ಗೋವಾಗೆ 5 ಸಾವಿರ ಬಾಟಲ್, ಮಣಿಪುರಕ್ಕೆ 7,400 ಬಾಟಲ್, ಮತ್ತು ಉತ್ತರಖಾಂಡದಿಂದ 30 ಸಾವಿರ ಬಾಟಲ್ಗಳಿಗೆ ಬೇಡಿಕೆ ಇಟ್ಟಿದ್ದರು.
ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಖಾಂಡಗಳಿಗೆ ಅವರು ಕೇಳಿದಷ್ಟು ಇಂಕ್ ಅನ್ನು ಸರಬರಾಜು ಮಾಡಲಾಗಿದೆ. ಉತ್ತರ ಪ್ರದೇಶ ದೊಡ್ಡ ರಾಜ್ಯವಾಗಿರುವುದರಿಂದ 4 ಲಕ್ಷ ಬಾಟಲ್ ಪೈಕಿ 2 ಲಕ್ಷ ಬಾಟಲ್ಗಳನ್ನು ಪೂರೈಕೆ ಮಾಡಲಾಗಿದೆ. ಉಳಿದ 2 ಲಕ್ಷ ಬಾಟಲ್ಗಳನ್ನು ಎರಡು- ಮೂರು ದಿನಗಳಲ್ಲಿ ಪೂರೈಕೆ ಮಾಡಲಿದ್ದಾರೆ.
ಈ ಪಂಚ ರಾಜ್ಯಗಳ ಚುನಾವಣೆಯಿಂದ ಮೈಲ್ಯಾಕ್ ಸಂಸ್ಥೆಗೆ 8 ಕೋಟಿ 96 ಲಕ್ಷದ 72 ಸಾವಿರ ರೂ. ವಹಿವಾಟು ಆಗಿದೆ. ಈ ಸಂಸ್ಥೆಯನ್ನು ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಮುಂದಾಲೋಚನೆಯಿಂದ ಸ್ಥಾಪಿಸಿದ್ದಾರೆ. ಇಡೀ ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಮೈಸೂರಿನ ಮೈಲ್ಯಾಕ್ ಇಂಕ್‌ಗೆ ಬಾರೀ ಬೇಡಿಕೆ ಇದೆ. ದಿನದಿಂದ ದಿನಕ್ಕೆ ಇಂಕ್ ಬಾಟಲ್ ಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.



