Latestಮೈಸೂರುರಾಜ್ಯ

ಮೈಸೂರು-ಬೆಂಗಳೂರು ಪ್ರಯಾಣಕ್ಕಿನ್ನು 90 ನಿಮಿಷ ಸಾಕು

ಮುಂದಿನ ವರ್ಷ ಅಕ್ಟೋಬರ್​ನಲ್ಲಿ ಮೈಸೂರು ಬೆಂಗಳೂರು-ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣವಾಗಲಿದೆ. 3 ರಾಜ್ಯಗಳ ವಹಿವಾಟಿಗೆ ಇದು ಅನುಕೂಲಕರವಾಗಿ ಒದಗಲಿದೆ.

ದಯಾಶಂಕರ ಮೈಲಿ

ಮೈಸೂರು: ಇನ್ನು ಮುಂದೆ ಬೆಂಗಳೂರು-ಮೈಸೂರು ನಡುವೆ ಮೂರು, ಮೂರುವರೆ ಗಂಟೆಗಳವರೆಗೆ ಸಂಚರಿಸಬೇಕಾಗಿಲ್ಲ. ಕೇವಲ 90 ನಿಮಿಷಗಳು ಸಾಕು.

ಇದರಿಂದ ಕರ್ನಾಟಕ ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಯ ನೀಡಿದಂತಾಗಿದೆ. ಇದರಿಂದ ಜನರು ಬೆಂಗಳೂರು, ಮೈಸೂರು ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ರಾಜ್ಯಗಳಿಗೆ ಬೇಗ ತಲುಪಬಹುದು. ಬೆಂಗಳೂರು, ಮೈಸೂರು ಮಾರ್ಗವಾಗಿ ತಮಿಳುನಾಡು, ಕೇರಳಕ್ಕೆ ಹೋಗುವ ಪ್ರಯಾಣಿಕರಿಗೂ ಈ ರಸ್ತೆ ಯಿಂದ ಅನುಕೂಲವಾಗಲಿದೆ. ಕರ್ನಾಟಕ, ತಮಿಳುನಾಡು, ಕೇರಳ ನಡುವಿನ ವ್ಯಾಪಾರ ವಹಿವಾಟಿಗೂ ಅನುಕೂಲವಾಗಲಿದೆ .

ಬೆಂಗಳೂರಿನಲ್ಲಿ ಕೆಲಸ ಮಾಡುವ ಮತ್ತು ಮೈಸೂರಿನಲ್ಲಿ ಕೆಲಸ ಮಾಡುವ ಬೆಂಗಳೂರು ಜನರು ಮುಂದಿನ ದಿನಗಳಲ್ಲಿ ದಿನನಿತ್ಯ ಸಂಚರಿಸಬಹುದು. ಇದರಿಂದ ಬಾಡಿಗೆ ಮನೆ ಮಾಡುವ ಅಗತ್ಯ ಇರುವುದಿಲ್ಲ.

ಬೆಂಗಳೂರು-ಮೈಸೂರು ನಡುವಿನ ರಸ್ತೆ ಸಂಚಾರಕ್ಕೆ ರೆಡಿಯಾದರೆ ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ನಿವೇಶನಗಳ ಬೆಲೆಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

ವ್ಯಾಪಾರಾಭಿವೃದ್ದಿಗೆ ಸಹಾಯಕ
ಮೈಸೂರು ಜಿಲ್ಲಾ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ನಂದನ್ ಕುಮಾರ್ ಈ ಬಗ್ಗೆ ಹೇಳುವುದು ಹೀಗೆ:
ಈ ರಸ್ತೆ ಆಗುವುದರಿಂದ ಮೈಸೂರು, ಬೆಂಗಳೂರು ಮಾತ್ರವೇ ಅಲ್ಲ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ನಡುವಿನ ವ್ಯಾಪಾರ ವಹಿವಾಟಿಗೆ ಸಹಾಯಕವಾಗುತ್ತದೆ. ಏನೇ ಇರಲಿ ಈ ರಸ್ತೆ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು.

ಅಕ್ಟೋಬರ್​ನಲ್ಲಿ ಸಿದ್ಧ: ಗಡ್ಕರಿ ಭರವಸೆ
ಲೋಕಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು .ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಎಂಪಿ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಬೆಂಗಳೂರು-ನಿಡಘಟ್ಟದ ನಡುವಿನ (56.2 ಕಿ.ಮೀ.ಗಳು) ಹೆದ್ದಾರಿ ರಸ್ತೆ ಕಾಮಗಾರಿ ಈಗಾಗಲೇ ಭಾಗಶಃ ಪೂರ್ಣಗೊಂಡಿದೆ (47 ಕಿ.ಮೀ.). ಈ ಯೋಜನೆಯ ಶೇ.80.49ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಮುಂದಿನ ವರ್ಷ ಅಕ್ಟೋಬರ್ ನಲ್ಲಿ ಈ ರಸ್ತೆ ಸಂಚಾರಕ್ಕೆ ಅಣಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಯೋಜನೆಯ ಕಾಮಗಾರಿಗಳ ಮೊದಲನೇ ಪ್ಯಾಕೇಜ್ ಮುಂಚಿತವಾಗಿಯೇ ಆರಂಭವಾಯಿತು. ನಂತರ ನಿಡಘಟ್ಟ-ಮೈಸೂರು (61.1 ಕಿ.ಮೀ.) ನಡುವಿನ ಎರಡನೇ ಪ್ಯಾಕೇಜ್ ಅನ್ನು ಅನುಮೋದಿಸಲಾಯಿತು. ಈ ಭಾಗದ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈವರೆಗೆ ಕೇವಲ 29.78 ಕಿ.ಮೀ.ಗಳಷ್ಟು ಉದ್ದದ ರಸ್ತೆ ಮಾತ್ರ ಭಾಗಶಃ ಅಥವಾ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಒಟ್ಟಾರೆ ಈ ಯೋಜನೆಯು ಶೇ.73.7ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ವರ್ಷ ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ. ಕೇಂದ್ರ ಸಚಿವರು ಅಭಯ ನೀಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆಯ ಕಾಮಗಾರಿಗಳನ್ನು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಪುನರಾರಂಭಿಸಲಾಗಿದೆ.

ಕೇಂದ್ರ ಸಚಿವರು ಈ ರಸ್ತೆಯ ಕಾಮಗಾರಿ ಸ್ಥಿತಿಗತಿ ಕುರಿತು ಲೋಕಸಭೆಯಲ್ಲಿ ನೀಡಿರುವ ಉತ್ತರ ಸಂಪೂರ್ಣ ವಿವರ ಹೀಗಿದೆ:
ಈ ಹೆದ್ದಾರಿಯಲ್ಲಿ ಅನೇಕ ಫ್ಲೈಓವರ್​ಗಳಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಂಗೇರಿ ಹಾಗೂ ಕುಂಬಳಗೊಡು ಬಳಿಯೂ ನಿರ್ಮಾಣವಾಗುತ್ತಿವೆ. ಈ ಮುಂಚೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅನೇಕ ತಿರುವುಗಳಿದ್ದವು. ಆದರೆ ಈ ಹೊಸ ಮಾರ್ಗದಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಸಾಧ್ಯವಾದಷ್ಟೂ ನೇರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಡುವೆ ಬಿಡದಿ, ರಾಮನಗರ-ಚನ್ನಪಟ್ಟಣಗಳ ಬಳಿಯ ಬೈಪಾಸ್ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ.

ಈ ಹೆದ್ದಾರಿ ಅನೇಕ, ನದಿ ಹಾಗೂ ಕೆರೆಗಳನ್ನು ಹಾದು ಹೋಗಿರುವ ಕಾರಣ ಉದ್ದನೆಯ ಸೇತುವೆಗಳ ನಿರ್ಮಾಣ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಈ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರು ಈ ಹೆದ್ದಾರಿ ವಿಸ್ತರಣಾ ಕಾಮಗಾರಿ ಪೂರ್ಣಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಏಕೆಂದರೆ, ಹೊಸ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ನಡುವೆ ಬರುವ ಪಟ್ಟಣಗಳ ಸ್ಥಳೀಯ ಸಂಚಾರ ದಟ್ಟಣೆ ಹೆದ್ದಾರಿ ವಾಹನಗಳಿಗೆ ಅಡ್ಡಿಯಾಗುವುದಿಲ್ಲ. ಹಾಗಾಗಿ, ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುವ ಮೂಲಕ ಬೆಂಗಳೂರು ಮೈಸೂರು ನಗರಗಳ ನಡುವಿನ ಪ್ರಯಾಣ ಸಮಯವೂ ಕಡಿಮೆಯಾಗಲಿದೆ.

ಈ ಯೋಜನೆಯ ಕಾಮಗಾರಿಗಳು ಇನ್ನೂ ಬೇಗ ಮುಗಿಯಬೇಕಾಗಿತ್ತು. ಆದರೆ ಹಲವಾರು ಸಮಸ್ಯೆಗಳಿಂದಾಗಿ ಇನ್ನೂ ಪೂರ್ಣಗೊಳಿಸಲಾಗಿಲ್ಲ. ಆರಂಭದಲ್ಲಿ ಭೂಮಿ ವಶಪಡಿಸಿಕೊಳ್ಳುವಲ್ಲಿ ಕೆಲವು ಸಮಸ್ಯೆಗಳು ಎದುರಾದವು. ಈ ಯೋಜನೆಯ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಭೂಮಿಪೂಜೆ ಸಮಾರಂಭ ನಡೆದ ನಂತರವೂ ಸಹ ಕಾಮಗಾರಿಗಳು ಆರಂಭವಾಗಲು ಹಲವು ತಿಂಗಳುಗಳೇ ಬೇಕಾಯಿತು. ಜೊತೆಗೆ ಕ್ವಾರಿ ಮತ್ತು ನಂತರದಲ್ಲಿ ಕೋವಿಡ್ ಮಹಾಮಾರಿ ಸಮಸ್ಯೆಗಳು ಎದುರಾದವು. ಕೋವಿಡ್‌ನ ಎರಡನೇ ಅಲೆಯಿಂದಾಗಿ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಈಗ ಪುನಃ ಕಾಮಗಾರಿಗಳು ಆರಂಭವಾಗಿದ್ದು, ಇನ್ನು ಮುಂದೆ ಯಾವುದೇ ತೊಂದರೆಗಳು ಎದುರಾಗದಿದ್ದಲ್ಲಿ ಈಗ ನೀಡಿರುವ ಡೆಡ್‌ಲೈನ್ ಅವಧಿಯೊಳಗೆ ಕಾಮಗಾರಿಗಳು ಪೊರ್ಣಗೊಳ್ಳಲಿವೆ ಎನ್ನುವುದು ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈ ಯೋಜನೆಯಡಿ, ನಾಲ್ಕು ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆರು-ಪಥಗಳಿಗೆ ವಿಸ್ತರಿಸಲಾಗುತ್ತಿದ್ದು, ಎರಡೂ ಕಡೆಗಳಲ್ಲಿ ಎರಡು ಸರ್ವೀಸ್ ಲೇನ್‌ಗಳಿವೆ. ಎನ್‌ಹೆಚ್‌ಎಐ ಪ್ರಕಾರ ಈ ಹೆದ್ದಾರಿ ಬಹುತೇಕ ‘ access controlled’ ರಸ್ತೆಯಾಗಿರುತ್ತದೆ ಹಾಗೂ ವಾಹನಚಾಲಕರಿಗೆ ಎಕ್ಸ್​ಪ್ರೆಸ್ ವೇ ಮೇಲೆ ಸಂಚರಿಸಿದ ಅನುಭವವಾಗಲಿದೆಯಂತೆ.

ಈ ಹೆದ್ದಾರಿ ಹಲವು ಪಟ್ಟಣಗಳನ್ನು ಹಾದು ಹೋಗುವ ಕಾರಣ, ಅನೇಕ ಬೈಪಾಸ್ ರಸ್ತೆಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಭಾಗದ ನಡುವೆ 51.75 ಕಿ.ಮೀ.ಗಳಷ್ಟು ಬೈಪಾಸ್‌ಗಳ ರೂಪದಲ್ಲಿ ಗ್ರೀನ್‌ಫೀಲ್ಡ್ ರಸ್ತೆಗಳಿರುತ್ತವೆ; ಬಿಡದಿ (6.9 ಕಿ.ಮೀ.ಗಳು), ರಾಮನಗರ-ಚನ್ನಪಟ್ಟಣ (22.35ಕಿ.ಮೀ.ಗಳು), ಮದ್ದೂರು (4.5ಕಿ.ಮೀ.ಗಳು), ಮಂಡ್ಯ (10ಕಿ.ಮೀ.ಗಳು) ಹಾಗೂ ಶ್ರೀರಂಗಪಟ್ಟಣ (8 ಕಿ.ಮೀ.ಗಳು). ರಾಮನಗರದ ಬಳಿ ನಿರ್ಮಿಸಲಾಗಿರುವ ಬೈಪಾಸ್ ರಸ್ತೆಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕುಂಬಳಗೋಡು ಹಾಗೂ ಶ್ರೀರಂಗಪಟ್ಟಣ ಬಳಿ ಟೋಲ್ ಬೂತ್‌ಗಳಿರುತ್ತವೆ. ಅಧಿಕಾರಿಗಳು ಈ ಹೆದ್ದಾರಿ ನಡುವೆ 49 ಅಂಡರ್‌ಪಾಸ್ ಹಾಗೂ 13 ಫ್ಲೈ ಓವರ್​ಗಳು ನಿರ್ಮಾಣವಾಗುತ್ತಿರುವ 62 ಜಂಕ್ಷನ್‌ಗಳನ್ನು ಗುರುತಿಸಿದ್ದಾರೆ. ಈ ಮೂಲಕ ಇಂತಹ ಗ್ರೇಡ್ ಜಂಕ್ಷನ್‌ಗಳಲ್ಲಿ ಕ್ರಾಸಿಂಗ್‌ಗಳನ್ನು ತಪ್ಪಿಸುವುದು ಉದ್ದೇಶ. ಮೇಲಾಗಿ, ವಿವಿಧ ನದಿ ಹಾಗೂ ಕೆರೆಗಳ ಮೇಲೆ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು, ನಾಲ್ಕು ರೈಲ್ವೆ ಓವರ್‌ಬ್ರಿಡ್ಜ್​ಗಳು ಹಾಗೂ 69 ಬಸ್ ನಿಲ್ದಾಣಗಳ ನಿರ್ಮಾಣವೂ ಸಹ ಈ ಯೋಜನೆಯಡಿ ಸೇರಿದೆ.

ಈ ಯೋಜನೆಯ ಒಟ್ಟು ಅಂದಾಜು ಮೊತ್ತ ರೂ. 7,400 ಕೋಟಿ (ಮೊದಲನೇ ಹಂತ: ರೂ.3,900 ಕೋಟಿ, ಎರಡನೇ ಹಂತ: ರೂ.3,500 ಕೋಟಿ). ಒಮ್ಮೆ ಈ ಹೆದ್ದಾರಿ ಪೂರ್ಣಗೊಂಡರೆ, ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವಿನ ಪ್ರಯಾಣ ಅವಧಿ ಕೇವಲ 90 ನಿಮಿಷಗಳಿಗೆ ಇಳಿಕೆಯಾಗುತ್ತದೆ. ಪ್ರಸ್ತುತ ಈ ಎರಡೂ ನಗರಗಳ ನಡುವಿನ ಪ್ರಯಾಣ ಒಂದು ಕಡೆಗೆ 3.5 ಗಂಟೆಗಳಾಗಿದೆ. ಹಾಗಾಗಿ ಈ ಯೋಜನೆ ಬಹಳ ಉಪಯುಕ್ತವಾಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button