ಕೆಲವರಿಗೆ ಸುಳ್ಳೇ ಮನೆದೇವರು, ಹೆಚ್ಡಿಕೆ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ

ರಾಮನಗರ: ಕೆಲವರು ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ, ಜಿಲ್ಲೆಯ ಜನರನ್ನೇ ಮರೆತಿದ್ದ ಅವರಿಗೆ ಕಳೆದ ಒಂದು ವರ್ಷದಿಂದ ಮಾತ್ರ ಜಿಲ್ಲೆ ನೆನಪಾಗಿದೆ. ಅವರಿಗೆ ಸುಳ್ಳೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ತಾಲೂಕಿನ ಬಸವನಪುರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಹತ್ತಿರವಾದಂತೆ ಅವರು ಸಕ್ರಿಯರಾಗಿದ್ದಾರೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅವರು ಹೇಳುತ್ತಿರುವ ಸುಳ್ಳನ್ನು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಉಲ್ತಾರ್ ಹೊಸದೊಡ್ಡಿ, ದೊಡ್ಡಮಣ್ಣುಗುಡ್ಡೆ, ಮಾಕಳಿ ಫಾರೆಸ್ಟ್, ತೆಂಗಿನಕಲ್ಲು ಫಾರೆಸ್ಟ್ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಜಿಲ್ಲೆಗೆ ಬಂದು 15 ವರ್ಷದ ನಂತರವಾದರೂ ಆ ಗ್ರಾಮಗಳ ಹೆಸರನ್ನು ತಿಳಿದುಕೊಂಡಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕೆಂಗೇರಿಯಿಂದ 170 ಕೋಟಿ ವೆಚ್ಚದಲ್ಲಿ 230 ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮಂಜೂರಾಗಿತ್ತು. ಆದರೆ, ಅದನ್ನು ಕಾಮಗಾರಿ ಹೊಣೆ ಹೊತ್ತಿದ್ದ ಗುತ್ತಿಗೆದಾರರ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುವುದು ಎಂದರು.
ನಾಲಿಗೆಗೆ ಮೂಳೆ ಇಲ್ಲ
ಆರಂಭದಲ್ಲಿ ಕೊಳಚೆ ನೀರನ್ನು ತಂದು ಜಿಲ್ಲೆಯ ಜನರಿಗೆ ತೊಂದರೆ ನೀಡುತ್ತಾರೆ ಎಂದು ಮಾತನಾಡುತ್ತಿದ್ದರು. ಆದರೆ, ಈಗ ವರಸೆ ಬದಲಾಯಿಸಿದ್ದು, ಎಲ್ಲಾ ಯೋಜನೆಗಳನ್ನೂ ನಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾರ ನಾಲಿಗೆಯಲ್ಲೂ ಮೂಳೆ ಇರಲ್ಲ, ಹಾಗಾಗಿ ಅದು ಹೇಗಾದರೂ ಹೊರಳುತ್ತಿರುತ್ತದೆ. ಆದರೆ, ಹೇಳಿದ್ದೆಲ್ಲವನ್ನೂ ಜನ ನಂಬುತ್ತಾರೆ ಎಂದು ತಿಳಿದುಕೊಳ್ಳುವುದು ಮೂರ್ಖತನ. ಸಮಯ ಬಂದಾಗ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಚುನಾವಣೆಗೆ ಇನ್ನೂ ಒಂದೂಕಾಲು ವರ್ಷ ಬಾಕಿ ಇದೆ, ಆ ಸಂದರ್ಭದಲ್ಲಿ ನಾವು ರಾಜಕಾರಣ ಮಾಡುತ್ತೇವೆ. ಆದರೆ, ಅಲ್ಲಿವರೆಗೆ ನಮ್ಮ ಗುರಿ ನೀರಾವರಿ ಕ್ಷೇತ್ರದಲ್ಲಿ ಪ್ರಗತಿ ಆಗಬೇಕು, ಅಂತರ್ಜಲ ವೃದ್ಧಿಸುವ ಮೂಲಕ ರೈತರಿಗೆ ಅನುಕೂಲಕಲ್ಪಿಸಲೇಬೇಕು. ಜಿಲ್ಲೆಯ ಎಲ್ಲಾ ರಸ್ತೆಗಳ ಅಭಿವೃದ್ಧಿ ಆಗಬೇಕು. ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಬೇಕು. ಕೇವಲ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ರಾಜಕೀಯ ಲಾಭ ಪಡೆಯುವ ಅಗತ್ಯ ನನಗಿಲ್ಲ. ಯಾರು ಏನುಬೇಕಾದರೂ ಹೇಳಿಕೊಳ್ಳಲಿ. ಮತದಾರ ದೇವರುಗಳಿಗೇ ಬಿಟ್ಟಿದ್ದೇನೆ ಎಂದರು.
ಕೈಲಾಂಚ ಹೋಬಳಿಯಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಂಡಿದ್ದು, ಮೂರ್ನಾಲ್ಕು ಕೆರೆಗಳು ತುಂಬಿವೆ. ಆ ಭಾಗದ ರೈತರ ಅಪೇಕ್ಷೆಯ ಮೇರೆಗೆ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಹಮ್ಮಿಕೊಳ್ಳಲಾನಗಿತ್ತು. ಆದರೆ, ಕೆಲವರ ರಾಜಕೀಯ ಒತ್ತಡದಿಂದ ಅಧಿಕಾರಿಗಳು ನಿಷೇಧಾಜ್ಞೆ ಹೇರಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಆಹ್ವಾನ ನೀಡಿದರೆ ಕೆರೆಗೆ ಬಾಗಿನ ಅರ್ಪಿಸಲಾಗುವುದು ಎಂದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಬೇರಾರೂ ಅದನ್ನು ಮಾಡಿಲ್ಲ, ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ಹಗಲುಗನಸು ಕಾಣುತ್ತಿದ್ದಾರೆ. ಸುಳ್ಳಿಗೂ ಒಂದು ಮಿತಿ ಇರುತ್ತದೆ. ಕೈಲಾಂಚ ಹೋಬಳಿ ಜನಕ್ಕೆ ಗೊತ್ತಿದೆ, ನಾನು ದಾಖಲೆ ತೋರಿಸಿ ನಂಬಿಸುವಂತಹ ಅಗತ್ಯತೆ ಇಲ್ಲ. ಸತ್ಯಾಸತ್ಯತೆ ಏನು ಎಂಬುದು ನಿಮಗೇ ಗೊತ್ತಿದೆ, ಅನವಶ್ಯಕವಾಗಿ ಮಾತನಾಡುವವರಿಗೆ ನಾನು ಉತ್ತರ ನೀಡಲ್ಲ. ಎಲ್ಲವನ್ನೂ ಜನರೇ ತೀರ್ಮಾನಿಸುತ್ತಾರೆ ಎಂದರು.
ನಾನು ಯಾರನ್ನೂ ಓಡಿಸುವುದಕ್ಕೆ ಹೋಗಲ್ಲ
ಅವರು ದೊಡ್ಡವರು, ನಾನು ಅವರ ಬಗ್ಗೆ ಮಾತನಾಡುವುದೂ ಇಲ್ಲ, ಟಾರ್ಗೆಟ್ ಮಾಡುವುದೂ ಇಲ್ಲ, ಅದರ ಅವಶ್ಯಕತೆ ನನಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದಷ್ಟೇ ನನ್ನ ಕೆಲಸ. ಒಬ್ಬ ಜನಪ್ರತಿನಿಧಿಯಾಗಿ ನಿಷ್ಠೆಯಿಂದ ಜನಸೇವೆ ಮಾಡುತ್ತಿದ್ದೇನೆ. ಇನ್ನೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ನನ್ನ ಜಾಯಮಾನ ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಸಿ.ಎಂ.ಲಿಂಗಪ್ಪ ಮುಂತಾದವರಿದ್ದರು.
