
ಬೆಂಗಳೂರು: ರಾಜ್ಯ ವಿಧಾನಪರಿಷತ್ ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಡಿ.10ರಂದು ನಡೆದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಮತಪತ್ರಗಳು ಮತ್ತು ಪ್ರಾಶಸ್ತ್ಯದ ಮತಗಳನ್ನು ಪ್ರತ್ಯೇಕವಾಗಿ ಎಣಿಸಬೇಕಿರುವುದರಿಂದ ಫಲಿತಾಂಶ ಸ್ವಲ್ಪ ತಡವಾಗಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣೆ ನಡೆದ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬೀದರ್, ವಿಜಯಪುರ, ಕಲಬುರ್ಗಿ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ-, ಶಿವಮೊಗ್ಗ-, ದಕ್ಷಿಣ ಕನ್ನಡ-, ಚಿಕ್ಕಮಗಳೂರು,ಹಾಸನ, ತುಮಕೂರು, ಮಂಡ್ಯ, , ಕೋಲಾರ, ಕೊಡಗು ಮತ್ತು ಮೈಸೂರು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ 25 ಸ್ಥಾನಗಳಲ್ಲಿ, ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳು 20 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆ ಇದಾಗಿರುವುದರಿಂದ ಕಣದಲ್ಲಿದ್ದ ಕೆಲ ಅಭ್ಯರ್ಥಿಗಳು ಹಣ, ಆಣೆ, ಪ್ರಮಾಣ ಮತ್ತಿತರ ಅಂಶಗಳ ಮೂಲಕ ಮತದಾರರನ್ನು ಆಕರ್ಷಿಸಿದ್ದರು.
ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು, ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು.
ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಮತ್ತು ಭಾರಿ ಪೈಪೋಟಿಗೆಡೆಯಾಗಿದ್ದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಕಣದಲ್ಲಿದ್ದ ಅಭ್ಯರ್ಥಿಗಳು ತಮ್ಮದೇ ಲೆಕ್ಕಾಚಾರದ ಮೂಲಕ ಗೆಲುವಿನ ನಿರೀಕ್ಷೆಯಲ್ಲಿವೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ಕಳೆದ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 99.80 ರಷ್ಟು ಮತದಾನವಾಗಿತ್ತು. 90ಸಾವಿರ ಮತದಾರರು ಕಣದಲ್ಲಿದ್ದ 91 ಅಭ್ಯರ್ಥಿಗಳ ಹಣೆಬರಹ ಬರಹ ಬರೆದಿದ್ದು ಗೆಲುವು ಯಾರಿಗೆ ಎಂಬುದು ಕುತೂಹಲಕಾರಿಯಾಗಿದೆ.



