ಮೇಕೆದಾಟು ಯೋಜನೆ ಕಾಂಗ್ರೆಸ್ ಗೆ ಮಾತ್ರವಲ್ಲಾ ಬಿಜೆಪಿ, ಜೆಡಿಎಸ್ ನವರಿಗೂ ಬೇಕು: ಜಿ ಟಿ ದೇವೇಗೌಡ

ಮೈಸೂರು: ಮೇಕೆದಾಟು ಕೇವಲ ಕಾಂಗ್ರೆಸ್ ನವರಿಗೆ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಬೇಕು. ರಾಜ್ಯಕ್ಕೆ ಕುಡಿಯುವ ನೀರು ಅತ್ಯಾವಶ್ಯಕವಾಗಿದೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುವುದಕ್ಕೆ ಇನ್ನೂ ಚುನಾವಣೆ ಒಂದೂವರೆ ವರ್ಷ ಇದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನ ಸಮರ್ಥಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಲ್ಲರಿಗೂ ಆಹ್ವಾನ ನೀಡಿ ಪಾದಯಾತ್ರೆ ಮಾಡುತ್ತಿದ್ದಾರೆ. ತ್ವರಿತವಾಗಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಅವಶ್ಯಕವಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಒಟ್ಟಾಗಿ ಸೇರಿ ಪಾದಯಾತ್ರೆ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಕೂಡಾ ಪಾದಯಾತ್ರೆ ತಡೆದಿಲ್ಲ. ತ್ವರಿತವಾಗಿ ಯೋಜನೆ ಜಾರಿ ಆಗ್ಬೇಕು ಅನ್ನೋದು ನಮ್ಮ ಆಶಯ ಎಂದು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಹೆಚ್ವಳ ವಾಗ್ತಿದೆ. ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಮತ್ತಷ್ಟು ಸಿದ್ದತೆ ಮಾಡಿಕೊಳ್ಳುತ್ತೇವೆ. ಕಳೆದ ಬಾರಿಯಂತೆ ಕೋವಿಡ್ ಸೆಂಟರ್ ಗಳ ನಿರ್ಮಾಣ ಮಾಡಲಾಗುತ್ತೆ. ಬೆಡ್ ಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಅಲ್ಲದೇ ಇಂದಿನಿಂದ ಬೂಸ್ಟರ್ ಡೋಸ್ ಕೂಡಾ ನೀಡಲಾಗುತ್ತಿದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.



