ಒಡೆಯರ್ ಭೇಟಿ ಮಾಡಿದ ಹೈದರಾಬಾದ್ ನಿಜಾಮರ ಮೊಮ್ಮಗ

ಮೈಸೂರು: 7ನೇ ನವಾಬ್ ಓಸ್ಮಾನ್ ಅಲಿಖಾನ್ ನಿಜಾಮ್ರ ಮೊಮ್ಮಗ ನವಾಬ್ ಮೀರ್ ನಜಾಫ್ ಅಲಿಖಾನ್ ಅವರು ಇಂದು ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನ ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೈಸೂರು ಅರಮನೆ ಮತ್ತು ನವಾಬರ ನಂಟು ತಲಾತಲಾಂತರದಿಂದಲೂ ಇದೆ. ಮೂರು ತಲೆಮಾರುಗಳನ್ನ ಮೀರಿದ ರಾಜಮನೆತನದವರು 100 ವರ್ಷಗಳ ನಂತರ ಪರಸ್ಪರ ಮರು ಸಂಪರ್ಕ ಮಾಡಿದ್ದಾರೆ. ಈ ವೇಳೆ ಯದುವೀರ್ ಒಡೆಯರ್ ಮತ್ತು ಮೀರ್ ನಜಾಫ್ ಅಲಿಖಾನ್ರು ತಮ್ಮ ಪೂರ್ವಜರ ಶ್ರೇಷ್ಠತೆ ಮೆಲುಕು ಹಾಕಿದ್ದಾರೆ. ಬ್ರಿಟಿಷರ ವಿರುದ್ಧ ಅಂದಿನ ಇತರ ರಾಜರುಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಆಸಿಫ್ ಜಾ ಅವರ ಪಾತ್ರ ಉನ್ನತವಾದದು ಎಂದು ಯದುವೀರ್ ಅವರು ಹೇಳಿದರು.
1965 ರಲ್ಲಿ ಭಾರತ ಚೀನಾ ಯುದ್ಧದ ಸಮಯದಲ್ಲಿ ಓಸ್ಮಾನ್ ಅಲಿ ಖಾನ್ ದೇಶವನ್ನು ಬೆಂಬಲಿಸಲು 5 ಸಾವಿರ ಕೆ ಜಿ ಚಿನ್ನವನ್ನು ಕೊಡುಗೆಯಾಗಿ ನೀಡಿದ್ದರು ಎಂದು ಯದುವಿರ್ ಸ್ಮರಿಸಿದರು. ಮೈಸೂರು ಅರಮನೆಯ ಪ್ರಮುಖ ಭಾಗದ ನಿರ್ಮಾಣಕ್ಕೆ ನಿಜಾಮರು ಬೆಂಬಲ ನೀಡಿದ್ದರು. ಅದೇ ಸಮಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸಹ ಬೆಂಬಲಿಸಿದ್ದರು. ಹೀಗಾಗಿ ಆ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಿಹೆಚ್ಡಿ ಪಡೆಯಲು ಸಹಾಯವಾಯಿತು ಎಂದು ನೆನೆಪು ಮಾಡಿಕೊಂಡರು.
ಯದುವೀರ್ ಕೃಷ್ಣದತ್ತ ಒಡೆಯರ್ ಅವರು 100 ವರ್ಷಗಳಷ್ಟು ಹಳೆಯದಾದ ನವಾಬ್ ಸರ್ಮೀರ್ ಓಸ್ಮಾನ್ ಅಲಿ ಖಾನ್ ಅವರ ಫೋಟೋವನ್ನು ನವಾಬ್ ಮೀರ್ ನಿಜಾಫ್ ಅಲಿ ಖಾನ್ ಅವರಿಗೆ ತೋರಿಸಿದರು.



