
ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಅಥವಾ ಅವರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಕೂಡಲೇ ಬಂಧಿಸಲಿ. ತಡ ಮಾಡುತ್ತಿರುವುದೇಕೆ ? ಸಮಯ ವ್ಯರ್ಥ ಮಾಡುತ್ತಿರುವುದೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಯಾರನ್ನೋ ಸಿಲುಕಿಸಲು ಸಾಧ್ಯವಿಲ್ಲ. ಇದು ಬೆಂಗಳೂರು ಮತ್ತು ಕರ್ನಾಟಕ ರಾಜ್ಯದ ಘನತೆಯ ವಿಚಾರ. ಹೀಗಾಗಿ ಈ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ ಎಂದರು.
ಹಣ್ಣು ತಿಂದವರು ಯಾರೋ, ಸಿಪ್ಪೆ ತಿಂದವರು ಯಾರೋ, ಮೂತಿಗೆ ಒರೆಸಿದವರು ಯಾರೋ, ಎಲ್ಲವೂ ಮುಂದೆ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ಯಾಕೆ ಹೋದರೊ, ಏನು ಗುಸುಗುಸು ನಡೆಯುತ್ತಿದೆಯೋ, ಅವರ ಪಕ್ಷದ ಕೆಲ ನಾಯಕರೇ ನಮಗೆ ಕರೆ ಮಾಡಿ, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಆ ವಿಚಾರ ಮಾತನಾಡುವುದು ಬೇಡ’ ಎಂದು ಉತ್ತರಿಸಿದರು.
ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಧೈರ್ಯ ತುಂಬಿದ್ದಾರೆ ಎಂಬ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ. ಆ ಪ್ರಕರಣದ ವಿವರಗಳನ್ನು ಸಮಗ್ರವಾಗಿ ಜನರ ಮುಂದೆ ಬಿಚ್ಚಿಡಲಿ. ಈ ವಿಚಾರವನ್ನು ಪ್ರಧಾನಿ ಮುಂದೆ ಇವರು ಪ್ರಸ್ತಾಪ ಮಾಡಿದ್ದೇಕೆ? ಅವರು ಯಾಕೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಯಾರಿಗಾದರೂ ತೊಂದರೆ ಅಥವಾ ನಷ್ಟ ಆಗಿದೆಯಾ? ಪ್ರಕರಣ ಹೇಗೆ ನಡೆದಿದೆ? ಯಾಕೆ ಬಂಧಿಸಿ ವಿಚಾರಣೆ ಮಾಡಿದರು? ಬಿಟ್ ಕಾಯಿನ್ ವಿಚಾರದಲ್ಲೇ ಯಾಕೆ ಎಫ್ಐಆರ್ ದಾಖಲಿಸಿದರು? ಇದೆಲ್ಲದರ ಕುರಿತು ಜನರ ಶಂಕೆ ನಿವಾರಿಸಲಿ ಎಂದರು.
ಮಾಮನಿ ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕರ ಹೆಸರಿದೆ ಎಂಬ ಪ್ರಶ್ನೆಗೆ, ‘ಆ ಪತ್ರದಲ್ಲಿರುವ ಹೆಸರುಗಳ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ? ಅದು ಸತ್ಯವೋ? ಸುಳ್ಳೋ ಎಂದು ನಾನು ಹೇಳುವುದಿಲ್ಲ. ಇದೆಲ್ಲವೂ ತನಿಖೆಯಾಗಬೇಕು. ಬಿಜೆಪಿಯವರು ಬಾಯಿ ಚಪಲಕ್ಕಾಗಿಯೇ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮೂಲಕ ಕಾಂಗ್ರೆಸ್ ನಾಯಕರ ಹೆಸರು ಹರಿಬಿಡುತ್ತಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದ ಶಿವಕುಮಾರ್, ಹಗರಣಕ್ಕೆ ಸಂಬಂಧಿಸಿದಂತೆ ಹಳೆಯ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿಯೂ ಕೆಲವು ಮಾಹಿತಿಗಳಿವೆ, ಸೂಕ್ತ ಸಮಯದಲ್ಲಿ ಅದನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ಹಗರಣದ ಬಗ್ಗೆ ಪೊಲೀಸರು ತನಿಖೆ ನಡೆಸಿ ಪ್ರಕರಣದ ವಿಚಾರಣೆಯನ್ನು ಇ.ಡಿ.ಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಈಗ ಅವರು ಕೆಲವು ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಳೇ ಪ್ರಕರಣ ಉಲ್ಲೇಖಿಸಿ ದಾರಿ ತಪ್ಪಿಸುವ ಕೆಲಸ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ನಡೆದಿದೆ ಎಂದು ದೂರಿದರು.
ಇಡೀ ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪ್ರಧಾನಿ ಅವರಿಗೆ ಜನಸಾಮಾನ್ಯ ಬರೆದ ದೂರಿನ ಪತ್ರವನ್ನು ಓದಿದ್ದೇನೆ. ಅದರಲ್ಲಿ ಅನೇಕ ಬಿಜೆಪಿ ನಾಯಕರ ಹೆಸರುಗಳಿವೆ. ಅದು ನಿಜವೇ? ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ? ಅವರ ಹೆಸರುಗಳನ್ನು ಬಹಿರಂಗ ಪಡಿಸಲಿ ಎಂದು ಶಿವಕುಮಾರ್ ಆಗ್ರಹಿಸಿದರು.
ಮುಖ್ಯಮಂತ್ರಿ ಅವರು ತಮ್ಮ ನಾಯಕರ ಹೆಸರು ಮುಚ್ಚಿಟ್ಟು, ಕಾಂಗ್ರೆಸ್ ನಾಯಕರ ಹೆಸರು ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಹೆಸರೂ ಹೊರಬರಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದರು.



