ಶಾಲಾ ಪಠ್ಯದಲ್ಲಿ ʼಬಾಬಾ ಬುಡನ್ ಗಿರಿʼ ಹೆಸರು ಬದಲಿಸುವ ಯತ್ನಕ್ಕೆ ಆಕ್ಷೇಪ

ಚಿಕ್ಕಮಗಳೂರು: ಶಾಲಾ ಪಠ್ಯದಲ್ಲಿ ಬಾಬಾ ಬುಡನ್ಗಿರಿ ಹೆಸರನ್ನು ದತ್ತಪೀಠ ಎಂದು ಬದಲಾಯಿಸಲು ಹೊರಟಿರುವ ಯತ್ನಕ್ಕೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ವೇದಿಕೆ ಸಂಚಾಲಕ ಗೌಸ್ ಮೊಹಿಯುದ್ದೀನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಎನ್ನುವುದನ್ನು ಯಾವುದೇ ಕಾರಣಕ್ಕೂ ದತ್ತಪೀಠ ಎಂದು ಪಠ್ಯದಲ್ಲಿ ದಾಖಲಿಸಬಾರದು ಎಂದು ಒತ್ತಾಯಿಸಿದ್ದಾರೆ.
ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾವನ್ನು ದಕ್ಷಿಣದ ಅಯೋಧ್ಯೆ ಮಾಡುತ್ತೇವೆ ಎಂದು ಹೊರಟಿರುವ ಸಂಘಪರಿವಾರವನ್ನು ಸರ್ಕಾರ ಬೆಂಬಲಿಸಲು ಹೊರಟಿದೆ ಎಂದು ಆರೋಪಿಸಿದರು.
ನ್ಯಾಯಾಲಯದಲ್ಲಿ ಎಲ್ಲೂ ದತ್ತಪೀಠ ಎಂದು ತೀರ್ಮಾನವಾಗಿಲ್ಲ. ದಾಖಲೆ ಮತ್ತು ಪುರಾವೆಗಳ ಆಧಾರದಲ್ಲಿ ಅಗತ್ಯ ಕಂಡುಬಂದರೆ ಮುಜಾವರ್ ಜೊತೆಗೆ ಅರ್ಚಕರನ್ನು ನೇಮಕ ಮಾಡಬಹುದೇ ಎಂದು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ವಸ್ತುಸ್ಥಿತಿ ಹೀಗಿದ್ದರೂ ಶಾಸಕ ಸಿ ಟಿ ರವಿ ಹಾಗೂ ಸಂಘ ಪರಿವಾರದವರು ಹಿಂದೂ ಅರ್ಚಕರ ನೇಮಕದ ಬಗ್ಗೆ ಮಾತನಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ



