
ಮೈಸೂರು ; ನಟ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನಾಯಕತ್ವ ವಹಿಸಿಕೊಳ್ಳಬೇಕು. ಅವರ ಮಾರ್ಗದರ್ಶನದಡಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆದ ಕನ್ನಡಪರ ಹೋರಾಟ ವಿಚಾರವಾಗಿ ಮಾತನಾಡಿ, ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು. ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು. ಸಿನಿಮಾ ರಂಗದಲ್ಲಿ ನಾಯಕತ್ವದ ಕೊರತೆ ಇದೆ. ಡಾ,ರಾಜಕುಮಾರ್ ಅವರ ನಂತರ ಅಂಬರೀಶ್ ಅವರು ನಾಯಕತ್ವ ವಹಿಸಿದ್ದರು. ಆದರೆ, ಈಗ ಯಾರೂ ಇಲ್ಲ. ಕನ್ನಡ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ ಎಂದರು.
ಮುಂದಿನ ದಿನಗಳಲ್ಲಿ ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಂಡರೆ ಬೆಂಬಲ ಕೊಡುತ್ತೀನಿ ಎಂದು ತಿಳಿಸಿದರು. ನಾನು ಟ್ವಿಟರ್ ಹೋರಾಟದ ವಿರೋಧಿ. ನಾನು ಸಹ ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳವಳಿಗೆ ಡಾ. ರಾಜ್ಕುಮಾರ್ ಅವರನ್ನು ಕರೆ ತಂದಿದ್ದು, ನಮ್ಮ ತಂದೆ ಲಂಕೇಶ್. ಡಾ. ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತಾ ಲೇಖನ ಬರೆದಿದ್ದರು. ನಂತರ ಡಾ. ರಾಜ್ ಹೋರಾಟಕ್ಕೆ ಬಂದಿದ್ದರು. ನಾವು ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.



