Latestಜಿಲ್ಲಾ ಸುದ್ದಿರಾಮನಗರ

ಕಾಲೇಜಿನಿಂದ ಶಾಲೆಗೆ ವ್ಯಾಪಿಸಿದ ಹಿಜಾಬ್ ಗಲಾಟೆ

ರಾಮನಗರ: ಜಿಲ್ಲೆಯಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಆರಂಭಗೊಂಡ ಎರಡನೇ ದಿನವೂ ಮುಂದುವರೆದಿರುವ ಹಿಜಾಬ್ ಗದ್ದಲ ಈಗ ಶಾಲೆಗೂ ವ್ಯಾಪಿಸಿದೆ.

ರಾಮನಗರ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಶುರುವಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಗುರುವಾರ ಕಾಲೇಜಿಗೆ ರಜೆ ಘೋಷಣೆ ಮಾಡಿ, ಆನ್ ಲೈನ್ ತರಗತಿ ನಡೆಸಲು ಆದೇಶ ಹೊರಡಿಸಿತು.

ಮೊದಲ ದಿನ ಪದವಿ ಕಾಲೇಜಿನಲ್ಲಿ ಕಾಣಿಸಿಕೊಂಡ ಗಲಾಟೆಯು, ಎರಡನೇ ದಿನ ಪದವಿ ಪೂರ್ವ ಕಾಲೇಜಿಗೂ ವ್ಯಾಪಿಸಿದೆ. ಮಾಗಡಿ ತಾಲೂಕಿನ ಕುದೂರು ಹೋಬಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 6ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿಕೊಂಡು ಆಗಮಿಸಿದ್ದಾರೆ.

ಅವರೆಲ್ಲರನ್ನು ತರಗತಿಗೆ ತೆರಳಲು ಅವಕಾಶ ನೀಡದೆ ಗೇಟಿನ ಬಳಿಯೇ ಕೂರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಲು ಅನುಮತಿ ನೀಡುವಂತೆ ಪಟ್ಟು ಹಿಡಿದು ವಿ ವಾಂಟ್ ಹಿಜಾಬ್ ಎಂದು ಘೋಷಣೆ ಕೂಗಿದ್ದಾರೆ.

ಘಟನೆ ವಿಷಯ ತಿಳಿದು ಮಾಗಡಿ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್, ಡಿವೈಎಸ್ಪಿ ಓಂಪ್ರಕಾಶ್ ಹಾಗೂ ಡಿಡಿಪಿಯು ಗೋವಿಂದರಾಜು ಅವರು, ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ ಪ್ರತಿಯನ್ನು ಓದಿ ಹೇಳುವ ಮೂಲಕ ಮನವೊಲಿಸಿದ್ದಾರೆ. ಅಧಿಕಾರಿಗಳ ಮಾತಿಗೆ ತಲೆ ಬಾಗಿದ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿಯೂ ಹಿಜಾಬ್ ಗಲಾಟೆ ನಡೆದಿದೆ. ಕಾಲೇಜಿನಲ್ಲಿ ಈ ಹಿಂದಿನಿಂದಲೂ ಸಮವಸ ಕಡ್ಡಾಯವಾಗಿದೆ. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ಕೇಳಿದ್ದಾರೆ. ಆಡಳಿತ ಮಂಡಳಿ ನಿರಾಕರಣೆ ಮಾಡಿತ್ತು.ಈ ವೇಳೆ ರಾಮನಗರ ತಹಸೀಲ್ದಾರ್ ವಿಜಯಕುಮಾರ್ ಭೇಟಿ ನೀಡಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ:

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹಿಜಾಬ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾಕಾರಿ ಡಾ.ಕೆ.ರಾಕೇಶ್ ಕುಮಾರ್ ರಾಮನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರಕ್ಕೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆ ಇಂದು ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಭೌತಿಕ ತರಗತಿ ಹೊರತುಪಡಿಸಿ, ಆನ್ ಲೈನ್ ಕ್ಲಾಸ್ ನಡೆಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.

ಕಾಲೇಜಿಗೆ ರಜೆ ಘೋಷಣೆ:
ಹಿಜಾಬ್ ಗಲಾಟೆ ಸಂಬಂಧ ರಾಮನಗರದ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಿಸಿ, ಮುಂದಿನ ಆದೇಶದ ವರೆಗೂ ಆನ್ ಲೈನ್ ಕ್ಲಾಸ್ ನಡೆಸುವಂತೆ ಜಿಲ್ಲಾಕಾರಿ ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕಾಲೇಜು ಪ್ರಾರಂಭಗೊಂಡ ಮೊದಲ ದಿನವಾದ ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದಿದ್ದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಮುಂದಾಗಿದ್ದರು. ಈ ವೇಳೆ ಹಿಜಾಬ್ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿತು. ಇದರಿಂದ ಕಾಲೇಜು ಮುಂಭಾಗ ಪ್ರತಿಭಟನೆಯು ನಡೆದಿತ್ತು. ಪೋಷಕರು, ವಿವಿಧ ಸಂಘಟನೆಗಳು, ಹಿಂದೂಪರ ಸಂಘಟನೆಗಳು ಸಹ ಜಮಾಯಿಸಿದ್ದವು. ಹೀಗಾಗಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಕಾಲೇಜಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button