ತಾರಕಕ್ಕೇರಿದ ಹಿಜಾಬ್, ಕೇಸರಿ ವಿವಾದ : ಕಲ್ಲು ತೂರಾಟ, ಲಾಠಿ ಚಾರ್ಜ್, ವಾಹನಗಳಿಗೆ ಹಾನಿ…!

ದಾವಣಗೆರೆ : ಜಿಲ್ಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಸಂಘರ್ಷ ತಾರಕಕ್ಕೇರಿದೆ. ಹರಿಹರ ಪಟ್ಟಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟವೂ ನಡೆದಿದೆ.
ಹರಿಹರ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಬಳಿ ಗಲಾಟೆ ನಡೆದಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಲಾಗಿದೆ.
ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ ಸಮುದಾಯದ ಜನರು ಕೇಸರಿ ಶಾಲು ಧರಿಸಿ ಹೋಗಲು ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದಿದ್ದು ಯಾಕೆ ಎಂದು ಕೆಲ ವಿದ್ಯಾರ್ಥಿಗಳು ತಗಾದೆ ತೆಗೆದಿದ್ದಾರೆ. ಆಗ ಮಾತಿನ ಚಕಮಕಿ ಜೋರಾಗಿದೆ. ಬಳಿಕ ಕಾಲೇಜು ಬಳಿ ಗಲಾಟೆ ಶುರು ಆಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆ ನಿಯಂತ್ರಣಕ್ಕೆ ಹೋದ ಪೊಲೀಸರ ಮೇಲೆಯೂ ಕೆಲ ಕಿಡಿಗೇಡಿಗಳ ಕಲ್ಲು ತೂರಾಟ ನಡೆಸಲಾಗಿದೆ.
ರಸ್ತೆಗಳಲ್ಲಿ ನಿಂತುಕೊಂಡು ಕಲ್ಲು ತೂರುತ್ತಿದ್ದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ವೇಳೆ ಪೊಲೀಸರು ಬಂದೂಕಿನ ಗುಂಡು ನೆಲಕ್ಕೆ ಹೊಡೆಯುವ ಮೂಲಕ ವಿದ್ಯಾರ್ಥಿಗಳನ್ನು ಚದುರಿಸುವ ಪ್ರಯತ್ನ ಮಾಡಿದರು. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಆಗಿದೆ. ಸ್ಥಳಕ್ಕೆ ಹರಿಹರ ಶಾಸಕ ಎಸ್ ರಾಮಪ್ಪ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರೂ ಹತೋಟಿಗೆ ಬಂದಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ.
