ಜಿಲ್ಲಾ ಸುದ್ದಿದಾವಣಗೆರೆ

ಪೊಲೀಸ್ ಜೀಪ್​ಗೆ ಕಲ್ಲು ತೂರಾಟ: ಲಘು ಲಾಠಿ ಪ್ರಹಾರ

ದಾವಣಗೆರೆ: ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು ಎನ್ನುವ ಸಂದೇಶ ಹರಡುತ್ತಿದ್ದಂತೆ ಒಂದು ಕೋಮಿನ ಜನರು ಹರಿಹರ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಅನ್ಯ ಕೋಮಿನ ಯುವಕನೊಬ್ಬ ತಮ್ಮ ಧಾರ್ಮಿಕ ಕೇಂದ್ರಗಳ ಭಾವಚಿತ್ರಗಳನ್ನು ಅಪವಿತ್ರಗೊಳಿಸಿ ರವಾನಿಸಿದ್ದಾನೆಂದು ಆರೋಪಿಸಿ ನೂರಾರು ಜನರು ಠಾಣೆಯ ಬಳಿ ಜಮಾಯಿಸಿದರು.
ಆಗ ಪಿಎಸ್‌ಐ ಸುನಿಲ್ ಕುಮಾರ್ ತೇಲಿ ಮಾತನಾಡಿ, ಆರೋಪಿ ಯುವಕನನ್ನು ಈಗಾಗಲೇ ಬಂಧಿಸಲಾಗಿದೆ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತ ರೀತಿಯಿಂದ ಮನೆಗೆ ತೆರಳಬೇಕೆಂದು ಮನವಿ ಮಾಡಿದರೂ ಕೇಳದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಸಮುದಾಯದ ಮುಖಂಡರು, ನಗರಸಭೆ ಸದಸ್ಯರನ್ನು ಠಾಣೆಗೆ ಕರೆಯಿಸಿ ಅವರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರು ಲಾಠಿ ಹಿಡಿದು ಚದುರಿಸಲು ಮುಂದಾದಾಗ ಕೆಲ ಕಿಡಿಗೇಡಿಗಳು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಿದ್ದು, ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದೆ. 

ಈ ವೇಳೆ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಬಸವರಾಜ್ ಮತ್ತು ಸಮುದಾಯದ ಮುಖಂಡರು, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಅಥವಾ ಮೊಬೈಲ್‌ಗಳ ಎಸ್ಸೆಮ್ಮೆಸ್, ಎಮ್ಮೆಮ್ಮೆಸ್ ಮೂಲಕ ಯಾವುದೋ ಒಂದು ವಿಷಯವನ್ನು ರವಾನಿಸಿದರೆಂದು ತಾಳ್ಮೆ ಕಳೆದುಕೊಳ್ಳಬಾರದು. ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಹೇಳಿದರು.

ಯಾವ ಧರ್ಮವೂ ಕೂಡ ಕೆಟ್ಟದ್ದನ್ನು ಬೋಧಿಸುವುದಿಲ್ಲ, ಪ್ರತಿಯೊಬ್ಬರೂ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಚ್ಯುತಿಯಾಗದಂತೆ ಬದುಕಬೇಕು. ಮನುಷ್ಯ ಬುದ್ದಿಜೀವಿ, ಸಾಮಾಜಿಕ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಕಾನೂನು ವ್ಯವಸ್ಥೆಯಡಿ ಕ್ರಮ ಕೈಗೊಳ್ಳಬೇಕು. ಹಿಂಸೆ ನಾಗರೀಕತೆಯ ಲಕ್ಷಣವಲ್ಲ ಎಂದು ಹೇಳಿ ನೆರೆದಿದ್ದ ಜನರನ್ನು ಚದುರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button