ಹಿಜಾಬ್- ಕೇಸರಿ ವಿವಾದ ಬೆಳೆಯಲು ಸರ್ಕಾರ ಕಾರಣ

ರಾಮನಗರ: ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ, ಇದು ಬಹಳ ಕ್ರೂಷಿಯಲ್ ಟೈಮ್. ಅವರಿಗೆ ಪರೀಕ್ಷೆಗಳು ಇದ್ದಾವೆ, ಈಗ ಡಿಸ್ಟಾರ್ಬ್ ಮಾಡೋದ್ರಲ್ಲಿ ಅರ್ಥ ಇಲ್ಲ. ವಿವಾದ ಬೆಳೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನಿಂದ ಶಾಲೆಗಳು ಪ್ರಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಜಾಬ್ – ಕೇಸರಿ ವಿವಾದವನ್ನು ಸರ್ಕಾರ ಕಂಟ್ರೋಲ್ ಮಾಡಬೇಕಿತ್ತು, ಆದರೆ ಬೆಳೆಯಲಿಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಪಾಪ ಅವರಿಗೆ ಪಾಲಿಸಿ ಗೊತ್ತಿಲ್ಲ, ನಾನು ಸಿಎಂ ಅವರಿಗೆ ಶಾಲಾ ಕಾಲೇಜಿಗೆ ರಜೆ ಕೊಡಿ ಎಂದು ಅಫೀಲ್ ಮಾಡಿದ್ದೆ, ಹಾಗಾಗಿ ರಜೆ ನೀಡಿದ್ದರು. ಕೋರ್ಟ್ ಮಧ್ಯಪ್ರವೇಶ ಮಾಡಿದೆ, ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಿದ್ದೇವೆ ಎಂದರು.
ಯಾರೋ ಒಬ್ಬ ಮಂತ್ರಿ, ರಾಷ್ಟ್ರಧ್ವಜ ತೆಗೆದು, ಕೇಸರಿ ಧ್ವಜ ಹಾಕ್ತೇವೆ ಎಂದಿದ್ದಾರೆ. ಇನ್ನು ಅವರ ಮೇಲೆ ಕೇಸ್ ಹಾಕಿಲ್ಲ, ನಾವು ಸುಮ್ಮನ್ನೆ ಬಿಡಬೇಕಾ ಎಂದು, ಕೆಂಪು ಕೋಟೆಯ ಮೇಲೆ ಭಗವಾನ್ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ ನವರ ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.
ಹೇಳಿಕೆ ನೀಡಿರುವ ಸಚಿವರಿಂದ ಸಿಎಂ ಬಸವರಾಜ ಬೊಮ್ಮಾಯಿ ಈ ಕೂಡಲೇ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಇದೇ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಹೋರಾಟ ನಡೆಯುತ್ತೆ . ” ರಾಷ್ಟ್ರಧ್ವಜ ಬೇಕೋ, ಕೇಸರಿ ಧ್ವಜ ಬೇಕೋ” ಎಂದು ಹೋರಾಟ ಮಾಡ್ತೇವೆ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಕೇಸರಿ ಧ್ವಜವನ್ನು ಅವರ ಮನೆ, ಮಠದಲ್ಲಿ ಇಟ್ಟುಕೊಳ್ಳಲಿ ನಮ್ಮ ಅಭ್ಯಂತರ ಇಲ್ಲ. ಆದರೆ ರಾಷ್ಟ್ರಧ್ವಜದ ಜಾಗಕ್ಕೆ ಕೇಸರಿ ಧ್ವಜ ಹಾಕಲು ನಿರ್ಧಾರ ಮಾಡ್ತಿದ್ದಾರೆ ಅಂದರೆ ಇದು ದೇಶದ್ರೋಹದ ಕೆಲಸ. ಅದನ್ನ ರಾಜ್ಯದ ಜನರು ತೀರ್ಮಾನ ಮಾಡಬೇಕು. ಸಿಎಂ ಅವರು ಕೂಡಲೇ ಅವರನ್ನ ಬಂಧಿಸಬೇಕು, ರಾಜೀನಾಮೆ ಪಡೆಯಬೇಕು ಎಂದರು.



