ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಶಿವರಾಜ್ ಕುಮಾರ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇತ್ತೀಚೆಗೆ ಉಪ ರಾಷ್ಟ್ರಪತಿಗಳನ್ನ ಭೇಟಿ ಮಾಡಿದ್ದಾರೆ. ಚೆನ್ನೈನ ರಾಜಭವನದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನ ಶಿವಣ್ಣ ಭೇಟಿ ಮಾಡಿದ್ದು ಅವುಗಳ ಫೋಟೋ ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿದಾಡುತ್ತಿದೆ.

ಶಿವರಾಜ್ ಕುಮಾರ್ ಹಾಗೂ ವೆಂಕಯ್ಯ ನಾಯ್ಡು ಭೇಟಿ ಸೌಹಾರ್ದಯುತವಾದದ್ದು ಎನ್ನಲಾಗ್ತಿದೆ. ಇದೇ ವೇಳೆ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಲು ವೆಂಕಯ್ಯ ನಾಯ್ಡು ಒಪ್ಪಿಗೆ ಸೂಚಿಸಿದ್ದಾಗಿ ನಟ ಶಿವರಾಜ್ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ನಟ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಅವರು ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಸಂತಾಪವನ್ನ ಸೂಚಿಸಿದ್ರು. ಅಲ್ಲದೆ ಅಪ್ಪು ನಿಧನ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದರು.

ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶಿವರಾಜ್ ಕುಮಾರ್ ಅದರ ನಡುವೆಯೂ ಬಿಡುವು ಮಾಡಿಕೊಂಡು ತಮಿಳುನಾಡಿಗೆ ತೆರಳಿದ್ದಾರೆ. ವೆಂಕಯ್ಯ ನಾಯ್ಡು ಅವರ ಜೊತೆ ಕೆಲವು ಪ್ರಮುಖ ವಿಷಯಗಳ ಕುರಿತು ಶಿವರಾಜ್ ಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಶಿವರಾಜ್ ಕುಮಾರ್ ರಾಜಭವನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಕೂಡ ಶಿವಣ್ಣ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ನಟ ಶಿವರಾಜ್ ಕುಮಾರ್ ಪತ್ನಿಯೊಂದಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನ ಭೇಟಿ ಮಾಡಿದ್ರು. ಸ್ಟಾಲಿನ್ರನ್ನ ಭೇಟಿ ಮಾಡಿದ ಬೆನ್ನಲ್ಲೇ ವೆಂಕಯ್ಯ ನಾಯ್ಡು ಅವರನ್ನ ಭೇಟಿಯಾಗಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.




