
ಬೆಂಗಳೂರು: ಕರ್ನಾಟಕ ಕಲ್ಯಾಣ, ಕಿತ್ತೂರುಕರ್ನಾಟಕ ಎಂದು ಮನಸ್ಸಿಗೆ ತೋಚಿದಂತೆ ಹೆಸರು ಬದಲಾವಣೆ ಮಾಡಿದರೆ, ಜನರ ಬದುಕು, ಭವಿಷ್ಯ ಬದಲಾವಣೆಯಾಗಲಿದೆಯೇ? ಎಂದು ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಪಕ್ಷದ ಎರಡನೇ ಹಂತದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡಿಗರ ಬದುಕನ್ನು ಹಸನು ಮಾಡಿ ಉತ್ತಮ ಭವಿಷ್ಯ ಕಟ್ಟಿಕೊಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಜೆಡಿಎಸ್ ಪಕ್ಷ ಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ ಜಲಧಾರೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ನ್ಯಾಯ ಸಮ್ಮತ ಪರಿಹಾರ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ವಿಭಿನ್ನ ರೀತಿಯ ಹೋರಾಟ ನಡೆಸಲಿದೆ ಎಂದರು
ಮೇಕೆ ದಾಟು ವಿಚಾರವಾಗಿ ಕಾಂಗ್ರೆಸ್ ನಾಯಕರು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಟೀಕಿಸುವುದಿಲ್ಲ. ಇದು ಅವರ ಸ್ವಂತ ಕಾರ್ಯಕ್ರಮವೋ ಅಥವಾ ಜೆಡಿಎಸ್ ಪಕ್ಷವನ್ನು ನೋಡಿ ಕಲಿತು ಕೊಂಡಿದ್ದಾರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ರಾಜ್ಯದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ,ಆದರೂ ಪರಭಾಷಿಕರಿಗೆ ಗೌರವಯುತ ರಕ್ಷಣೆ ಕೊಡಲಾಗಿದೆ. ಉತ್ತರಪ್ರದೇಶ, ಗುಜರಾತ್, ಅಸ್ಸಾಂ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳ ಜನರು ಇಲ್ಲಿ ಗೌರವಯುತವಾಗಿ ಬದುಕುತ್ತಿದ್ದು ಅವರಿಗೂ ನೀರು ಕೊಡಬೇಕಾದ ಅಗತ್ಯವಿದೆ ಎಂದರು.
ದೇವನಹಳ್ಳಿ ಏರ್ ಪೋರ್ಟ್ ನಿಂದ ಆಂಧ್ರಕ್ಕೆ ಅನುಕೂಲವಾಗಿದೆ ಅಕ್ಕಪಕ್ಕದ ರಾಜ್ಯಗಳ ಜನಪ್ರತಿನಿಧಿಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನರಿಗೆ ಆಗುತ್ತಿರುವ ದ್ರೋಹವನ್ನ ಸರಿಪಡಿಸಲು ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿಯಿಲ್ಲ , ಮನಸ್ಸಿಲ್ಲ ಎಂದು ದೂರಿದರು.



