
ಬೆಂಗಳೂರು: ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ಥಬ್ಧಚಿತ್ರವನ್ನ ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಖಂಡನೀಯ. ಇದು ನಮ್ಮ ನೆಲಕ್ಕೆ ಮಾಡಿರುವ ಅಪಮಾನ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಹೆಚ್ಡಿಕೆ ನಾರಾಯಣ ಗುರುಗಳು ಸ್ತ್ರೀ ಸಮಾನತೆಯನ್ನ ಪ್ರತಿಪಾದಿಸಿ ಜಾತಿ, ಮತ ಭೇದಗಳನ್ನ ಧಿಕ್ಕರಿಸಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ. ಮನುಷ್ಯರೆಲ್ಲಾ ಒಂದೇ ಎಂದು ಹೇಳಿ ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು ಎಂದು ಸಾರಿ ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು.
ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರ ತಿರಸ್ಕರಿಸಿರುವುದು ಕ್ಷಮಾರ್ಹವಲ್ಲದ ತಪ್ಪು. ಇದು ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ. ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತಕ್ಷಣವೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ಗೆ ಸಮಿತಿ ಅಂಗೀಕಾರ ಮಾಡಬೇಕು. ಅಲ್ಲದೆ ಕೂಡಲೇ ಸಂಬಂಧಪಟ್ಟ ಕೇಂದ್ರದ ಸಚಿವಾಲಯ ಮತ್ತು ಅಧಿಕಾರಿಗಳು ಈ ಅಚಾತುರ್ಯವನ್ನು ಸರಿ ಮಾಡಬೇಕು ಎಂದು ಹೆಚ್ಡಿಕೆ ಒತ್ತಾಯ ಮಾಡಿದ್ದಾರೆ.



