ಕನ್ನಡ ನೆಲ-ಜಲ ರಕ್ಷಣೆಗೆ ಸರಕಾರ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ರಾಜ್ಯದ ನೆಲ-ಜಲ ಹಾಗೂ ಜನರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಗಾವಿಯಲ್ಲಿ ಹೇಳಿದರು.
ಸಂಕೇಶರದಲ್ಲಿ ಮಾತನಾಡಿದ ಸಿಎಂ, ಸೂಕ್ತ ವ್ಯವಸ್ಥೆ ಲಭ್ಯವಾದರೆ ರಾಜ್ಯದಲ್ಲಿ ವಿದ್ಯುತ್ ವಿತರಣೆ ವ್ಯವಸ್ಥೆ ವಿಕೇಂದ್ರೀಕರಣಕ್ಕೆ ಸರಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.
ಸರಕಾರಿ ಸೇವೆಗಳ ವಿಕೇಂದ್ರೀಕರಣ:
ಜನವರಿ 26 ರಿಂದ ಐದು ಜಿಲ್ಲೆಗಳಲ್ಲಿ ಸರಕಾರದ ಪ್ರತಿಯೊಂದು ಸೇವೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು. ಸರಕಾರಿ ಸೇವೆಗಳ ವಿಕೇಂದ್ರೀಕರಣ ಮಾಡುವ ಮೂಲಕ ಜನರ ಮನೆಬಾಗಿಲಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ರೈತರ ಮಕ್ಕಳಿಗೆ ಶಿಷ್ಯವೇತನ ಒದಗಿಸುವ ಮೂಲಕ ಅವರ ಬದುಕಿಗೆ ಸರಕಾರ ಆಸರೆಯಾಗಲಿದೆ. ರೈತರ ಮಕ್ಕಳು ಬೇರೆಬೇರೆ ರೀತಿಯ ವೃತ್ತಿಶಿಕ್ಷಣ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ.
ಅಮೃತ ಯೋಜನೆಗಳ ಜಾರಿ ಮೂಲಕ ಹಳ್ಳಿಗಳ ಪ್ರಗತಿಗೆ ಸರಕಾರ ಮುಂದಾಗಿದೆ ಎಂದರು.
ಏತ ನೀರಾವರಿ ಯೋಜನೆಗಳಿಗೆ ಶೀಘ್ರ ಚಾಲನೆ:
ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿ ಸಿದ್ಧೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ಆರು ಬ್ಯಾರೇಜ್ ತುಂಬಿಸಲು ಆದಷ್ಟು ಬೇಗನೇ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪ್ರಧಾನಮಂತ್ರಿಗಳ ದೂರದೃಷ್ಟಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಒಟ್ಟಾರೆ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಲಿದೆ ಎಂದು ಹೇಳಿದರು.
ಸಂಕೇಶ್ವರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ:
ಸಂಕೇಶ್ವರ ಪಟ್ಟಣಕ್ಕೆ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಯೋಜನೆಗೆ ವರ್ಷಾಂತ್ಯದ ಲ್ಲಿ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಶ್ವನಾಥ್ ಕತ್ತಿ ಹಾಗೂ ತಮ್ಮ ತಂದೆಯವರಾದ ದಿ.ಎಸ್.ಆರ್.ಬೊಮ್ಮಾಯಿ ಅವರ ಆತ್ಮೀಯ ಒಡನಾಟವನ್ನು ಸ್ಮರಿಸಿದರು.
ಅಧಿಕಾರ ಶಾಶ್ವತವಲ್ಲ; ಪ್ರತಿದಿನ ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಪ್ರೀತಿ-ವಿಶ್ವಾಸ ಇರುವವರೆಗೆ ನಾವು ಅಧಿಕಾರದಲ್ಲಿರುತ್ತೇವೆ ಎಂದರು.
ಜನರ ಸುತ್ತ ಅಭಿವೃದ್ಧಿ ಕೆಲಸಗಳಾಗಬೇಕು; ಸುಸಜ್ಜಿತ ಬಸ್ ನಿಲ್ದಾಣ, ಪುರಸಭೆ ಕಟ್ಟಡಗಳಿಂದ ಇಡೀ ತಾಲ್ಲೂಕಿನ ಹಾಗೂ ಪಟ್ಟಣದ ಜನರಿಗೆ ಅನುಕೂಲವಾಗಲಿದೆ ಎಂದರು.
ವಸತಿ ಕಲ್ಪಿಸಲು 50 ಎಕರೆ ಜಮೀನು ಹಸ್ತಾಂತರ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಕೇಶ್ವರ ಹೋಬಳಿಯ ಹರಗಾಪುರ ಗ್ರಾಮದ ಸರಕಾರಿ ಗಾಯರಾಣದ 50 ಎಕರೆ ಜಮೀನನ್ನು ವಸತಿರಹಿತರಿಗೆ ವಸತಿ ಕಲ್ಪಿಸಲು ಸಂಕೇಶ್ವರ ಪುರಸಭೆಗೆ ಹಸ್ತಾಂತರಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧ – ಶ್ರೀರಾಮುಲು :
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಮುಖ್ಯಮಂತ್ರಿಗಳು ಅಭಿವೃದ್ಧಿಯ ಕಲ್ಪನೆಯನ್ನು ಸಣ್ಣ ಪಟ್ಟಣ ಹಾಗೂ ಗ್ರಾಮಗಳ ಕಡೆಗೆ ತೆಗೆದುಕೊಂಡು ಹೋಗುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯದ ನಾಗರಿಕರು ಸರಕಾರಿ ಬಸ್ ಗಳಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯಿಂದ ಪ್ರಯಾಣ ಕೈಗೊಳ್ಳಲು ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ರಾಮುಲು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಭಿವೃದ್ಧಿ ಕೆಲಸಗಳು ಡಬಲ್ ಎಂಜಿನ್ ಗಾಡಿಯಂತೆ ನಾಗಾಲೋಟದಲ್ಲಿ ಸಾಗಿವೆ ಎಂದು ಹೇಳಿದರು.



