ಸಹಾಯ ಮಾಡುವ ನೆಪದಲ್ಲಿ ವಂಚನೆ: 78 ಎಟಿಎಂ ಕಾರ್ಡ್ ವಶ

ದಾವಣಗೆರೆ: ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನೇ ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಬಸವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, 78 ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಯೋಗಾನಂದ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 8,58,800 ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ನೂರಕ್ಕೆ ನೂರರಷ್ಟು ಜಪ್ತಿ ಮಾಡಲಾಗಿದೆ. 18 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಹಿರಿಯೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಚನ್ನಗಿರಿ, ತರೀಕೆರೆ, ತುಮಕೂರು, ಶಿಗ್ಗಾಂವಿ, ಹಿರೇಕೆರೂರು ಸೇರಿದಂತೆ ವಿವಿಧೆಡೆ ಹಣ ದೋಚಿದ್ದ.
ಈತ ಎಂ. ಎ. ಓದಿ ಪಿಹೆಚ್ ಡಿ ಪದವಿ ಪಡೆದಿದ್ದ. ಈತನಿಗೆ 47 ವರ್ಷ ವಯಸ್ಸು. ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿದ ಬಸವನಗರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಬಿಡಿಸಿಕೊಳ್ಳಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಅನ್ನು ಉಪಯೋಗಿಸಿ ಅವರಿಗೆ ನಕಲಿ ಎಟಿಎಂ ಕಾರ್ಡ್ ಕೊಡುತ್ತಿದ್ದ. ಅಸಲಿ ಎಟಿಎಂ ಕಾರ್ಡ್ ಪಡೆದು ಹಣ ಪಡೆಯುತ್ತಿದ್ದ. 17 ಸಾವಿರ ರೂಪಾಯಿಯಿಂದ 3 ಲಕ್ಷದವರೆಗೆ ವಂಚಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ತಿಳಿಸಿದ್ದಾರೆ.
ಮುಚ್ಚುನೂರು ಗ್ರಾಮದ 75 ವರ್ಷದ ಪಾಪಣ್ಣ ಎಂಬುವವರು ಕಳೆದ ವರ್ಷದ ನವೆಂಬರ್ 30ರಂದು ದಾವಣಗೆರೆ ಮಂಡಿಪೇಟೆಯ ಎಸ್ ಬಿ ಐ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಹಣ ಬಿಡಿಸಿಕೊಳ್ಳಲು ಹೋಗಿದ್ದರು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಯೋಗಾನಂದ ಎಟಿಎಂ ಕಾರ್ಡ್ ಪಡೆದು ಅದಕ್ಕೆ ಹೋಲಿಕೆಯಾಗುವ ನಕಲಿ ಕಾರ್ಡ್ ಕೊಟ್ಟಿದ್ದ. ಬೇರೆ ಕಡೆ ಹೋಗಿ ಹಣ ಪಡೆದಿದ್ದ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಯೋಗಾನಂದನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಆರೋಪಿ ಹಿಡಿಯಲು ಸಹಕಾರಿಯಾಯಿತು ಎಂದು ಮಾಹಿತಿ ನೀಡಿದರು.
