Latestಅಂಕಣಗಳುರಾಜಕೀಯರಾಷ್ಟ್ರೀಯ

ಗುಂಪುಹಿಂಸೆ ಪೋಷಿಸುತ್ತಿರುವ ರಾಜಕಾರಣ; ಎಲ್ಲವೂ ಚುನಾವಣೆ ಲಾಭಕ್ಕೆ ಎಂಬುದೇ ಘೋರ

ಎಂ ಹೈದರ್

ದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಧರ್ಮದ ಕಾರಣಕ್ಕೆ ಜಾತಿಯ ಕಾರಣಕ್ಕೆ ಅಮಾಯಕರ ಮೇಲೆ ನಡೆದಿರುವ ಆಕ್ರಮಣಗಳ ಸುಮಾರು ಏಳು ಪ್ರಕರಣಗಳು ಮಧ್ಯಪ್ರದೇಶ ಉತ್ತರ ಪ್ರದೇಶಗಳಲ್ಲೇ ಬೆಳಕಿಗೆ ಬಂದಿವೆ. ಘಟನೆಗಳ ವೀಡಿಯೋಗಳು ವೈರಲ್ ಆಗಿದ್ದರಿಂದ ಇವುಗಳು ಬೆಳಕಿಗೆ ಬಂದಿವೆ.

ಮಧ್ಯಪ್ರದೇಶದ ನೀಮಚ್ ನಲ್ಲಿ ಕನ್ನಯ್ಯ ಭೀಮ್ ಎಂಬ ಆದಿವಾಸಿ ವ್ಯಕ್ತಿಯೊಬ್ಬರನ್ನು ಕಳ್ಳತನದ ಆರೋಪ ಹೊರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಗುಂಪು ಆ ವ್ಯಕ್ತಿಯನ್ನು ಟ್ರಕ್ ಒಂದಕ್ಕೆ ಹಗ್ಗದಿಂದ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಕೊಂದುಹಾಕಿದ್ದಾರೆ.

ಅಬ್ದುಲ್ ಎಂಬ ವ್ಯಕ್ತಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಗುಂಪೊಂದು ಬೆದರಿಕೆ ಹಾಕಿ ಜೈ ಶ್ರೀರಾಮ್ ಎಂದು ಕೂಗಿಸಿದೆ. ರಿವಾದಲ್ಲಿ ಹರ್ಷದ್ ಎಂಬ ಯುವಕನಿಗೆ ಬ್ಯಾಟರಿ ಕಳ್ಳತನದ ಆರೋಪ ಹೊರಿಸಿ ಗುಂಪು ಹಲ್ಲೆ ನಡೆಯಿತು. ಆತ ನಾನು ಕಳ್ಳತನ ಮಾಡಿಲ್ಲ ಎಂದು ಎಷ್ಟೇ ಅಂಗಲಾಚಿದರೂ ಗುಂಪು ಆತನನ್ನು ಮಾರಣಾಂತಿಕವಾಗಿ ಥಳಿಸಿತು.

ದೇವಾಸ್ ನಲ್ಲಿ ಜಹೀರ್ ಖಾನ್ ಎಂಬ ವ್ಯಕ್ತಿಯೊಬ್ಬರನ್ನು ಆಧಾರ್ ಕಾರ್ಡ್ ತೋರಿಸಲಿಲ್ಲ ಎಂಬ ಕಾರಣಕ್ಕೆ ಗುಂಪು ಹಲ್ಲೆ ನಡೆಯಿತು. ಇಂದೋರ್ ನಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದ ಯುವಕನನ್ನು ಥಳಿಸಿ ಆತನಿಂದ ಬಳೆಗಳನ್ನು ಕಿತ್ತುಕೊಂಡು ಬಳೆ ವ್ಯಾಪಾರ ಮಾಡುವ ನೆಪದಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಮರುಳು ಮಾಡುವ ಆರೋಪ ಹೊರಿಸಲಾಯಿತು.

ಉತ್ತರ ಪ್ರದೇಶದ ಮಥುರಾದಲ್ಲಿ ದೋಸೆ ಹೋಟೆಲ್ ಗೆ ಶ್ರೀನಾಥ್ ದೋಸೆ ಹೋಟೆಲ್ ಎಂದು ಹೆಸರಿಟ್ಟಿದ್ದು ಯಾಕೆ ಎಂದು ಗುಂಪೊಂದು ಹೋಟೆಲ್ ನಲ್ಲಿ ದಾಂಧಲೆ ನಡೆಸಿತು. ಕಾರಣ ಅದರ ಮಾಲಿಕ ಮುಸ್ಲಿಮನಾಗಿದ್ದು ಹೋಟೆಲ್ ಹೆಸರನ್ನು ಶ್ರೀನಾಥ್ ದೋಸೆ ಎಂದು ಹೆಸರಿಟ್ಟಿದ್ದು ತಪ್ಪು ಎಂಬುದು ದಾಂಧಲೆಕೋರರ ವಾದವಾಗಿತ್ತು. ಕೊನೆಗೆ ಆ ಹೋಟೆಲ್ ಮಾಲಿಕ ಶ್ರೀನಾಥ್ ದೋಸೆ ಬದಲಿಸಿ ಅಮೆರಿಕನ್ ದೋಸೆ ಕಾರ್ನರ್ ಎಂದು ಹೋಟೆಲ್ ಹೆಸರನ್ನು ಬದಲಿಸಬೇಕಾಯಿತು.

ಕಾನ್ಪುರದಲ್ಲಿ ಇ-ರಿಕ್ಷಾ ಚಾಲಕ ಅಶ್ರಾರ್ ಅಹಮದ್ ಎಂಬ ವ್ಯಕ್ತಿಯ ಮೇಲೆ ಮತಾಂತರದ ಆರೋಪ ಹೊರಿಸಿ ಅವರ ಮಗಳು ಅಳುತ್ತಾ ಅಂಗಾಲಾಚುತ್ತಿದ್ದರೂ ಗುಂಪೊಂದು ಥಳಿಸಿ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಪ್ರಕರಣದ ನಂತರ ಪೊಲೀಸರು ಪ್ರಕರಣ ನಡೆದ ದಿನವೇ ಸ್ಟೇಷನ್ ಜಾಮೀನಿನ ಮೂಲಕ ಆರೋಪಿಗಳನ್ನು ತಕ್ಷಣವೇ ಬಿಡುಗಡೆ ಮಾಡಿದರು.

ಇದು ಕೇವಲ ಎರಡು ವಾರಗಳಲ್ಲಿ ವಿಡಿಯೋ ವೈರಲ್ ಆಗಿದ್ದರಿಂದ ಬೆಳಕಿಗೆ ಬಂದ ಪ್ರಕರಣಗಳು. ಇನ್ನೂ ವಿಡಿಯೋ ಇಲ್ಲದೆ ಬೆಳಕಿಗೆ ಬಾರದೆ ಹೋದ ಪ್ರಕರಣಗಳು ಅದೆಷ್ಟಿದೆಯೋ?

ಮತ್ತೆರಡು ವಾರ ಹಿಂದಕ್ಕೆ ಕಣ್ಣು ಹಾಯಿಸಿದರೆ ದೆಹಲಿಯ ಜಂತರ್ ಮಂತರ್ ನಲ್ಲಿ “ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಇರಬೇಕಾದರೆ ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂದು ಸಂಘಟನೆಯೊಂದು ಘೋಷಣೆ ಕೂಗಿತು. ಅಲ್ಲದೇ ದಸ್ತಕ್ ನ ಪತ್ರಕರ್ತ ಅನುಮೋಲ್ ಪ್ರೀತಮ್ ರವರಿಗೆ ಜೈ ಶ್ರೀರಾಮ್ ಎಂದು ಹೇಳಲು ಅಲ್ಲಿ ನೆರೆದ ಗುಂಪು ಒತ್ತಡ ಹಾಕಿತು. ಇದರ ನೇತೃತ್ವವನ್ನು ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ವಹಿಸಿಕೊಂಡಿದ್ದು, ಈ ಪ್ರಕರಣದ ವೀಡಿಯೋ ವೈರಲ್ ಆಗಿ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಯಿತಾದರೂ ಒಂದೇ ದಿನದಲ್ಲಿ ಆರೋಪಿಗಳಿಗೆ ಜಾಮೀನು ದೊರೆಯಿತು.

ಹೀಗೆ ದೇಶದಾದ್ಯಂತ ಈಗ ಗುಂಪು ಹಲ್ಲೆಗಳು ಹತ್ಯೆಗಳು ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ಬಹುತೇಕ ಎಲ್ಲ ಸಂತ್ರಸ್ತರು ಮುಸ್ಲಿಮರು ಇಲ್ಲವೇ ದಲಿತರು ಅಥವಾ ದುರ್ಬಲ ವರ್ಗದವರೇ ಆಗಿರುತ್ತಾರೆ. ಹಾಗಾಗಿ ಇವುಗಳು ಗಂಭೀರ ಸ್ವರೂಪ ಪಡೆದುಕೊಳ್ಳದೆ ಮುಚ್ಚಿ ಹೋಗುತ್ತಿವೆ ಮತ್ತು ಬಿಜೆಪಿ ಸರ್ಕಾರ ಆರೋಪಿಗಳ ಮೇಲೆ ಕಠಿಣ ಕಾರ್ಯಾಚರಣೆ ಕೈಗೊಳ್ಳುವುದಿಲ್ಲ. ಬದಲಿಗೆ ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಪಕ್ಷದಲ್ಲಿ ಸ್ಥಾನ ನೀಡಿ ಪುರಸ್ಕರಿಸುತ್ತದೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ಇರುವುದರಿಂದ ಜನರ ಮಧ್ಯೆ ದ್ವೇಷ ಹರಡಿ ಅದರ ಲಾಭ ಪಡೆಯುವ ಹುನ್ನಾರ ಬಿಜೆಪಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳ ಲೆಕ್ಕಾಚಾರದ ಫಲಿತಾಂಶವೇ ಈ ಅಮಾಯಕರ ಮೇಲೆ ನಡೆಯುತ್ತಿರುವ ಅಮಾನವೀಯ ಹಿಂಸೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿಯನ್ನು ಪ್ರಭುತ್ವ ಹೇಗೆ ತನ್ನ ಗೆಲುವಿನ ಮೆಟ್ಟಿಲಾಗಿ ಉಪಯೋಗಿಸಿತು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ.

ಜನಪರ ಕೆಲಸ ಮಾಡಲು ವಿಫಲವಾದ ಪ್ರಭುತ್ವ ಚುನಾವಣೆಗಳನ್ನು ಗೆಲ್ಲುವ ಹುನ್ನಾರದಿಂದ ಸಮಾಜದಲ್ಲಿ ಒಡಕು ಉಂಟುಮಾಡಿ ಕೋಮುದ್ವೇಷ ಹರಡಿ ಗಲಭೆ ನಡೆದಾಗ ಬಲಿಯಾಗುವುದು ಸಾಮಾನ್ಯ ಜನ. ಈ ರೀತಿಯಾಗಿ ಜನರ ಬದುಕಿನ ಜೊತೆ ಚೆಲ್ಲಾಟವಾಡಿ ಜನರು ಪರಸ್ಪರ ದ್ವೇಷದಿಂದ ಬದುಕುವಂತೆ ಮಾಡುತ್ತಿರುವುದು ಅಕ್ಷಮ್ಯ.

Spread the love

Related Articles

Leave a Reply

Your email address will not be published. Required fields are marked *

Back to top button