Breaking NewsLatestಜಿಲ್ಲಾ ಸುದ್ದಿದಾವಣಗೆರೆ

ದಾವಣಗೆರೆಯಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ : ಮೂವರ ಸೆರೆ

ದಾವಣಗೆರೆ: ನಗರದ ಎಲೇಬೇತೂರು ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಹಂತಕರನ್ನು ಬಂಧಿಸಿದ್ದಾರೆ.

ಎಲೇಬೇತೂರು ಗ್ರಾಮದ ಕುಮಾರ ನಾಯ್ಕ, ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕಿನ ಮರಿಯಪ್ಪ, ಪರಶುರಾಮ್ ಎಂಬಾತನನ್ನು ಸೆರೆ ಹಿಡಿದಿದ್ದು, ಬಂಧಿತರಿಂದ 1,75,000 ನಗದು, 188 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು 9,27,000 ಮೌಲ್ಯದ ಬಂಗಾರ, ನಗದು ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಎಲೇಬೇತೂರು ಗ್ರಾಮದ ಕುಮಾರ ನಾಯ್ಕ ಎಂಬಾತ ಗುರುಸಿದ್ದಯ್ಯ ಬಳಿ ಮೂರು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಪ್ರತಿಯಾಗಿ ತನ್ನ ಹೆಂಡತಿಯ 40 ಗ್ರಾಂ ಚಿನ್ನ ಅಡವಿಟ್ಟಿದ್ದ. ಇದನ್ನು ತೀರಿಸಲು ಆಗದ ಕಾರಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ‌ನಾಯ್ಕನು ಪರಶುರಾಮ್ ಹಾಗೂ ಮರಿಯಪ್ಪರ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ, ಗುರುಸಿದ್ದಯ್ಯರ ಮನೆಯಲ್ಲಿ ಹಣ ಇರುತ್ತೆ, ಬಂಗಾರ ಸಿಗುತ್ತೆ ಎಂದು ಪುಸಲಾಯಿಸಿ ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದ.

ಕಳೆದ ತಿಂಗಳ 24 ರಂದು ರಾತ್ರಿ 8.30ರಿಂದ 8.45ರ ಸುಮಾರಿಗೆ ಮನೆಗೆ ಬಂದಿದ್ದ ಮೂವರು ಗುರುಸಿದ್ದಯ್ಯ ಹಾಗೂ ಸರೋಜಮ್ಮ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಹಲವರ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು.‌ ಕೊನೆಗೂ ಹಂತಕರನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ ಪ್ರಕರಣಕ್ಕೆ ಕೊನೆ ಹಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button