ಕೇಂದ್ರ ಸರ್ಕಾರ ಇನ್ನಾದರೂ ಸರ್ವಾಧಿಕಾರಿ ಮನಃಸ್ಥಿತಿಯಿಂದ ಹೊರಬರಲಿ: ಡಿಕೆ ಶಿವಕುಮಾರ್

ನವದೆಹಲಿ: ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ನಿರ್ಧಾರ ಪ್ರಕಟಿಸಿರುವುದು ದೇಶದ ಅನ್ನದಾತ ಮತ್ತು ಕಾಂಗ್ರೆಸ್ನ ಹೋರಾಟಕ್ಕೆ ಸಂದ ಚಾರಿತ್ರಿಕ ಜಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳು ಎಪಿಎಂಸಿ ಮಾರುಕಟ್ಟೆಗೆ ಮಾರಕವಾಗಿದ್ದವು. ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಿರಲಿಲ್ಲ. ದೇಶದ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶ, ಒಪ್ಪಂದ ಕೃಷಿ ಸೇರಿದಂತೆ ಇತರೆ ಅಂಶಗಳು ರೈತರ ಭವಿಷ್ಯವನ್ನೇ ಸಮಾಧಿ ಮಾಡುತ್ತಿದ್ದವು ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಅನ್ನದಾತರು ಚಳಿ, ಮಳೆ, ಬಿಸಿಲೆನ್ನದೆ ಬೀದಿಗಿಳಿದು ಸುದೀರ್ಘ ಹೋರಾಟ ಮಾಡಿದ್ದರು. ಈ ಹೋರಾಟ ಹತ್ತಿಕ್ಕಲು ಸರ್ಕಾರ ಅಧಿಕಾರ, ಪೊಲೀಸ್ ಬಲ ಪ್ರಯೋಗಿಸಿತ್ತು. ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಭವಿಷ್ಯ ರಕ್ಷಣೆಗೆ ಬದ್ಧವಾಗಿ ನಿಂತರು ಎಂದು ಹೇಳಿದ್ದಾರೆ.
ರೈತರ ಪ್ರಾಣತ್ಯಾಗ ಈ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದು, ಕೇಂದ್ರ ಸರ್ಕಾರ ಇದೀಗ ಅನ್ನದಾತನ ಮುಂದೆ ಮಂಡಿಯೂರಿದೆ. ದೇಶದ ಅನ್ನದಾತನನ್ನು ಎದುರುಹಾಕಿಕೊಂಡು ಉಳಿದವರಿಲ್ಲ. ಅಂದು ಬ್ರಿಟೀಷರು ರೈತರ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಕಾಲ್ಕಿತ್ತರು. ಇಂದು ಬಿಜೆಪಿ ಅದೇ ತಪ್ಪು ಮಾಡಿ ಬುದ್ಧಿ ಕಲಿತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಕೂಡ ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್ ಪಕ್ಷ ಸಂಸತ್ತಿನ ಉಭಯ ಸದನಗಳು, ರಾಜ್ಯ ವಿಧಾನ ಮಂಡಲಗಳಲ್ಲಿ ಈ ಕರಾಳ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡಿತ್ತು. ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಈ ಕರಾಳ ಕಾಯ್ದೆಯ ಹಿಂದೆ ಅಡಗಿರುವ ಕೇಂದ್ರ ಸರ್ಕಾರದ ಷಡ್ಯಂತ್ರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೆವು ಎಂದಿದ್ದಾರೆ.
ಕೇಂದ್ರ ಸರ್ಕಾರ ಇನ್ನುಮುಂದಾದರು ತನ್ನ ಸರ್ವಾಧಿಕಾರಿ ಮನಃಸ್ಥಿತಿಯಿಂದ ಹೊರಬಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು. ದೇಶ ಹಾಗೂ ಅನ್ನದಾತನ ಹಿತದೃಷ್ಟಿಯಿಂದ ಎಲ್ಲರ ಜತೆ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
