ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ಸಿನಿಮಾಗೆ ವಿರಾಟ್ ಆಯ್ಕೆ

ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕು ಅಂತಾ ಅದೆಷ್ಟೊ ನಿರ್ದೇಶಕರು ಸ್ಕ್ರಿಪ್ಟ್ ಬರೆದಿದ್ದಾರೆ. ಆದರೆ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಸಾವಿರಾರು ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಅವರಿಗೆ ಅಂತಾ ಬರೆದ ಸ್ಕ್ರಿಪ್ಟ್ ಗಳೆಲ್ಲ ಬೇರೆಯವರ ಪಾಲಾಗಿದೆ. ಇದೀಗ ಪುನೀತ್ ನಟಿಸಬೇಕಿದ್ದ ಸಿನಿಮಾಗೆ ಕಿಸ್ ಖ್ಯಾತಿಯ ವಿರಾಟ್ ಅಭಿನಯಿಸುತ್ತಿದ್ದಾರೆ.
ಹೌದು ಪುನೀತ್ ರಾಜ್ ಕುಮಾರ್ ಗಾಗಿ ಕಥೆ ಬರೆದಿದ್ದ ದಿನಕರ್ ತೂಗುದೀಪ ಆ ಕಥೆಗೆ ಬೇರೆ ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಕಿಸ್ ಖ್ಯಾತಿಯ ವಿರಾಟ್ ಬಣ್ಣ ಹಚ್ಚಲಿದ್ದಾರೆ. ಇಂದು ವಿರಾಟ್ ಹುಟ್ಟುಹಬ್ಬವಾದ ಹಿನ್ನೆಲೆ ಇಂದು ಸಿನಿಮಾ ಪೋಸ್ಟರ್ನನ್ನು ಚಿತ್ರತಂಡ ಬಿಡುಗಡೆ ಮಾಡಿದ್ದಾರೆ. ಇದು ವಿರಾಟ್ 3ನೇ ಸಿನಿಮಾ. ಮೂರನೇ ಚಿತ್ರಕ್ಕೆ ಇಷ್ಟು ದೊಡ್ಡ ಪ್ರಾಜೆಕ್ಟ್ ಸಿಕ್ಕಿರುವುದಕ್ಕೆ ವಿರಾಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಚಿತ್ರವನ್ನು ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಹಿಟ್ ನಿರ್ದೇಶಕರ ಸಾಲಿನಲ್ಲಿ ದಿನಕರ್ ಅವರು ಇದ್ದು, ಇವರ ನಿರ್ದೇಶನದ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ತುಂಬಾ ವರ್ಷಗಳ ನಂತರ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
