
ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಬಹಳ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ, ರಾಜ್ಯದ ಯುವಜನರ ಮನಗೆಲ್ಲಲು ಯುವಜನರಿಗಾಗಿಯೇ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಹೊರ ತಂದಿದೆ. ಶುಕ್ರವಾರ ಲಖ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಯಾಂಕ ವಾದ್ರಾ ಅವರು ಭರ್ತಿ ವಿಧಾನ್ (ನೇಮಕ ವಿಧಾನ) ಹಸರಿನ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಚುನಾವಣೆಯಲ್ಲಿ ಯುವ ಮತದಾರರ ಗಮನಸೆಳೆಯುವ ಪ್ರಯತ್ನ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಉತ್ತರ ಪ್ರದೇಶ ಯುವ ಜನರಿಗೆ ಹೊಸ ದೃಷ್ಟಿಕೋನ ನೀಡಲು ಸಾಧ್ಯ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪ್ರಣಾಳಿಕೆಯಲ್ಲಿರುವ ಅಂಶಗಳು ಪೊಳ್ಳು ಭರವಸೆಗಳಲ್ಲ. ಯುವಜನರನ್ನು ಸಂಪರ್ಕಿಸಿ ಕಾರ್ಯಾನುಷ್ಠಾನ ಮಾಡುವಂತಹ ಭರವಸೆಗಳು ಎಂದರು.
ಉತ್ತರ ಪ್ರದೇಶದಲ್ಲಿ ಯುವಜನರು ಮತ್ತು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಮಹಿಳೆಯರಿಗೆ ಶೇಕಡ 40ರಷ್ಟು ಸ್ಥಾನಗಳನ್ನು ಪಕ್ಷ ಮೀಸಲಿಟ್ಟಿದೆ. ಯುವಜನರು ಮತ್ತು ಮಹಿಳೆಯರ ಮೂಲಕವೇ ರಾಜ್ಯದಲ್ಲಿ ಪಕ್ಷ ಮರಳಿ ಅಧಿಕಾರ ಹಿಡಿಯುವ ಪ್ರಯತ್ನವನ್ನು ಚುರುಕುಗೊಳಿಸುತ್ತಿದೆ.
