ನಾವು ಯಾರನ್ನೂ ಖರೀದಿ ಮಾಡಿಲ್ಲಾ: ವಿಶ್ವನಾಥ್ ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಟಾಂಗ್

ಮೈಸೂರು: ಪಕ್ಷ ಅವರಿಗೆ ಟಿಕೆಟ್ ಕೊಟ್ಟು ಎಂಎಲ್ಸಿ ಮಾಡಿದೆ. ಆದರೆ ಈಗ ಅಧಿಕಾರ ಇಲ್ಲ ಅಂತ ಪಕ್ಷ ಬಿಟ್ಟು ಹೋಗಿದ್ದಾರೆ. ನಾವು ಯಾರನ್ನು ಹಣ ಕೊಟ್ಟು ಖರೀದಿ ಮಾಡಿಲ್ಲ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಗೆ ಯತೀಂದ್ರ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಾಗ ಬಿಜೆಪಿಯಿಂದ ಎಷ್ಟು ಜನ ಶಾಸಕರು ಪಕ್ಷಕ್ಕೆ ಬರುತ್ತಾರೆ? ಎಂದು ಗೊತ್ತಾಗುತ್ತದೆ. ನಾವು ಬಿಜೆಪಿಯವರ ರೀತಿ ಆಪರೇಷನ್ ಮಾಡಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಶಾಸಕರೂ ಆಗಿರುವ ಸಿದ್ದರಾಮ್ಯಯ ಅವರ ಪುತ್ರ ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ತಿರುಗೇಟು ನೀಡಿದರು.
ಹೆಚ್. ವಿಶ್ವನಾಥ್ ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಬಿಜೆಪಿ ಪಕ್ಷದಲ್ಲೇ ಅವರಿಗೆ ಯಾವುದೇ ಮಾನ್ಯತೆ ಇಲ್ಲ. ಅದಕ್ಕಾಗಿ ಬೇರೆ ಪಕ್ಷದ ಬಗ್ಗೆ ಮಾತನಾಡುತ್ತಾರೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಬೆಳೆಸುವುದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಕೃತಜ್ಞತೆ ಇಲ್ಲದ ರೀತಿ ಎಂದಿಗೂ ನಡೆದುಕೊಂಡಿಲ್ಲ ಎಂದರು.
ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿ ಮಾಡಲ್ಲ. ನಾವು ಸರ್ಕಾರವನ್ನು ಬೀಳಿಸಬೇಕಿಲ್ಲ. ಚುನಾವಣೆ ಹತ್ತಿರ ಬಂದಾಗ ಅವರೇ ನಮ್ಮ ಹತ್ತಿರ ಬರ್ತಾರೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿದರು.
