ಹುಟ್ಟಿ ಬೆಳೆದ ಮನೆ ಮಾರಿದ ಅಮಿತಾಬ್ ಬಚ್ಚನ್

ನಟ ಅಮಿತಾಬ್ ಬಚ್ಚನ್ ಭಾವುಕ ನಂಟು ಹೊಂದಿದ್ದ ಮನೆಯನ್ನ ಮಾರಾಟ ಮಾಡಿದ್ದಾರೆ. ತಾಯಿಯಿಂದ ಬಂದಿದ್ದ ಮುಂಬೈನ್ ಗುಲ್ಮೊಹರ್ ಪಾರ್ಕ್ ಬಳಿ ಇರುವ ಸೋಪಾನ್ ಹೆಸರಿನ ಭವ್ಯ ಬಂಗಲೆಯನ್ನ ಅಮಿತಾಬ್ ತಮ್ಮ ಆಪ್ತ ಸ್ನೇಹಿತರೊಬ್ಬರಿಗೆ ಮಾರಾಟ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ತಾಯಿ ತೇಜಿ ಬಚ್ಚನ್ ಹೆಸರಿನಲ್ಲಿದ್ದ ಸೋಪಾನ್ ಬಂಗಲೆ ಬಳಿಕ ಅಮಿತಾಬ್ ಹೆಸರಿಗೆ ವರ್ಗಾವಣೆಯಾಗಿತ್ತು. ಹಲವು ವರ್ಷಗಳ ಕಾಲ ಬಂಗ್ಲೆಯನ್ನ ನೋಡಿಕೊಂಡಿದ್ದ ಅಮಿತಾಬ್ ಬಚ್ಚನ್ ಇದೀಗ ಆಪ್ತ ಸ್ನೇಹಿತ ಉದ್ಯಮಿ ನ್ಯೂಜಾನ್ ಸಂಸ್ಥೆಯ ಸಿಇಒ ಅವ್ನಿ ಬದೇರ್ಗೆ ಮಾರಾಟ ಮಾಡಿದ್ದಾರೆ.
ಅವ್ನಿ ಹಾಗೂ ಬಚ್ಚನ್ ಕುಟುಂಬ ಕಳೆದ 30 ವರ್ಷಗಳಿಂದ ಆಪ್ತ ನಂಟು ಹೊಂದಿದೆ. ಅವ್ನಿ ಅವರ ಗುಲ್ಮೊಹರ್ ಪಾರ್ಕ್ ಏರಿಯಾದಲ್ಲಿ ಹಲವು ದಶಕಗಳಿಂದ ವಾಸವಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ ಮಾರಿರುವ ಸ್ಥಳವು ಅವ್ನಿ ನಿವಾಸಕ್ಕೆ ಹತ್ತಿರದಲ್ಲೇ ಇದೆ.
418.05 ಚದರ ಅಡಿಯಲ್ಲಿ ನಿರ್ಮಾಣವಾಗಿರುವ ಬಂಗ್ಲೆಯನ್ನ ಬರೋಬ್ಬರಿ 23 ಕೋಟಿ ರೂಪಾಯಿಗೆ ಅವ್ನಿ ಖರೀದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವ್ನಿ ನಾವು ಈಗಾಗಲೇ ಇರುವ ಏರಿಯಾದಲ್ಲಿಯೇ ಮತ್ತೊಂದು ಆಸ್ತಿ ಖರೀದಿ ಮಾಡಲು ಯೋಚಿಸಿದ್ದೆವು. ಅದೇ ಸಮಯಕ್ಕೆ ಈ ಆಫರ್ ಬಂದಿತ್ತು. ಹಾಗಾಗಿ ನಾವು ಈ ಬಂಗ್ಲೆಯನ್ನ ಖರೀದಿ ಮಾಡಿದ್ದಾಗಿ ಹೇಳಿದ್ದಾರೆ.
ಈಗಿರುವ ಕಟ್ಟಡವು ಹಳೆಯದಾಗಿದ್ದು ಅದನ್ನ ಒಡೆದು ತಮಗೆ ಅನುಕೂಲವಾಗುವಂತೆ ಕಟ್ಟುವುದಾಗಿ ಅವ್ನಿ ಹೇಳಿದ್ದಾರೆ. ಅಮಿತಾಬ್ ಹುಟ್ಟಿ ಬೆಳದ ಮೂಲ ಮನೆಯನ್ನ ಇದೀಗ ಮಾರಾಟ ಮಾಡಿದ್ದು ಅಮಿತಾಬ್ರ ಬಾಲ್ಯದ ಸಾಕಷ್ಟು ನೆನಪುಗಳ ಈ ಮನೆಯಲ್ಲಿವೆ. ಸದ್ಯ ಅಮಿತಾಬ್ ಹೆಸರಿನಲ್ಲಿ ಸಾಕಷ್ಟು ಅದ್ದೂರಿ ಮನೆ, ಐಷಾರಾಮಿ ಬಂಗಲೆ, ಅಪಾರ್ಟ್ಮೆಂಟ್ಗಳಿವೆ.



