Latestಅಂಕಣಗಳುರಾಜಕೀಯರಾಜ್ಯರಾಷ್ಟ್ರೀಯ

ರಾಜ್ಯದ ಹಕ್ಕುಗಳ ಮೇಲೆ ದಾಳಿಗೆಂದೇ ಹೊಸ ಸಹಕಾರ ಖಾತೆ; ಸುಮಾರು 5 ಲಕ್ಷ ಕೋಟಿಯ ಮೇಲೆ ಕೇಂದ್ರದ ಕಣ್ಣು

ಎಂ ಹೈದರ್

ರಾಜ್ಯಗಳ ಸಂವಿಧಾನದತ್ತವಾದ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಭವಿಷ್ಯದಲ್ಲಿ ಎಲ್ಲವನ್ನೂ ಕೇಂದ್ರದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯಗಳ ಸ್ವಾಯತ್ತತೆಯ ಮೇಲೆ ನಿಯಂತ್ರಣ ಸಾದಿಸಿ ರಾಜ್ಯಗಳ ಆರ್ಥಿಕತೆಯಲ್ಲಿ ಹಸ್ತಕ್ಷೇಪ ಮಾಡಿ ರಾಜ್ಯ ಸರ್ಕಾರಗಳು ಕೇಂದ್ರದ ಮುಂದೆ ಮಂಡಿಯೂರುವಂತೆ ಮಾಡುವುದೇ ಅದರ ಉದ್ದೇಶವಾಗಿದೆ.

ಕೇಂದ್ರ ಸರ್ಕಾರ ಕೃಷಿ ಜೊತೆಯಲ್ಲಿದ್ದ ‘ಸಹಕಾರ ಖಾತೆ’ಯನ್ನು ಪ್ರತ್ಯೇಕಿಸಿ ಹೊಸ ಖಾತೆಯನ್ನು ರಚಿಸಿದೆ. ರಾಜ್ಯ ಪಟ್ಟಿಯಲ್ಲಿರುವ ಸಹಕಾರ ಕ್ಷೇತ್ರವನ್ನು ತನ್ನ ಹತೋಟಿಗೆ ತರಲು ಕೇಂದ್ರದ ಈ ನಡೆ ರಾಜ್ಯಗಳ ಮೇಲಿನ ಸ್ವಾಯತ್ತತೆಯನ್ನು ಕಸಿಯುವುದೇ ಆಗಿದೆ. ರಾಜ್ಯ ಪಟ್ಟಿಯಲ್ಲಿರುವ ಸಹಕಾರ ಖಾತೆಯ ಮೇಲೆ ನಿಯಂತ್ರಣ ಸಾಧಿಸಿ ರಾಜ್ಯಗಳ ಮೇಲೆ ಹಸ್ತಕ್ಷೇಪ ಮಾಡುವುದು ಅಸಾಂವಿಧಾನಿಕ ನಡೆಯಾಗಿದೆ.

ದೊಡ್ಡ ಕಾರ್ಪೊರೇಟ್ ಗಳು ಸಾಲ ಮರು ಪಾವತಿಸದೆ ಇತ್ಯಾದಿ ಕಾರಣಗಳಿಂದ ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕ್ ಗಳಿಗೆ ದಕ್ಷಿಣದ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದ ಬ್ಯಾಂಕ್ ಗಳನ್ನು ವಿಲೀನ ಮಾಡಿದಂತೆ ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿನ ಸಹಕಾರ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕೇಂದ್ರದ ಹುನ್ನಾರ ಇದರಲ್ಲಿ ಅಡಗಿದೆ.

ಈಗಾಗಲೇ ಜಿಎಸ್ ಟಿ ಮೂಲಕ ದಕ್ಷಿಣದ ರಾಜ್ಯಗಳ ಬೆನ್ನು ಮೂಳೆ ಮುರಿದಿರುವ ಕೇಂದ್ರ ಸರ್ಕಾರ ಮತ್ತೆ ಸಹಕಾರ ಖಾತೆಯನ್ನು ಸೃಷ್ಟಿಸಿ ಸಹಕಾರ ಕ್ಷೇತ್ರದ ಸುಮಾರು 5 ಲಕ್ಷ ಕೋಟಿ ಹಣದ ಮೇಲೆ ಕೇಂದ್ರ ತನ್ನ ಕೆಂಗಣ್ಣು ನೆಟ್ಟಿದೆ.

ರಾಜ್ಯದಲ್ಲಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಗಳು ಕೃಷಿ ಆಧಾರದ ಸಹಕಾರ ಬ್ಯಾಂಕ್‌ಗಳು ಅಲ್ಲದೇ ರಾಜ್ಯದಲ್ಲಿ ನೂರಾರು ವಿವಿಧ ರೂಪಗಳ ಸಹಕಾರ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಹಾಲು ಉತ್ಪಾದನೆ, ಗೃಹ ನಿರ್ಮಾಣ, ಕೈಗಾರಿಕೆ, ಸ್ಪಿನ್ನಿಂಗ್‌ ಮಿಲ್‌, ಸಕ್ಕರೆ ಕಾರ್ಖಾನೆ, ಮಾರುಕಟ್ಟೆ, ನೀರಾವರಿ, ಕೂಡುಬೇಸಾಯ, ಸಂಸ್ಕರಣ, ನೌಕರರು, ಬಳಕೆದಾರರು, ನಗರ ಸಹಕಾರ ಮುಂತಾದ ಸಹಕಾರ ಸಂಸ್ಥೆಗಳು ಅಸ್ತಿತ್ವದಲ್ಲಿವೆ ಇವುಗಳ ಮೂಲಕ ರೈತರು ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸುವ ಮಧ್ಯಮ ವರ್ಗದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದು ಕೇಂದ್ರದ ಪ್ರಭುತ್ವಕ್ಕೆ ಸಹನೀಯ ವಾಗುತ್ತಿಲ್ಲ. ಹೇಗಾದರೂ ಮಾಡಿ ರಾಜ್ಯಗಳಿಂದ ಅದನ್ನು ಕಿತ್ತುಕೊಂಡು, ರಾಜ್ಯಗಳು ಅಂಗಲಾಚುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂಬ ಹುನ್ನಾರದ ಒಂದೊಂದು ದಾಳವನ್ನು ಹಂತ ಹಂತವಾಗಿ ಮೋದಿ ಸರ್ಕಾರ ಉರುಳಿಸುತ್ತಿದೆ.

ಕಾಂಗ್ರೆಸ್ ಇದನ್ನು ವಿರೋಧಿಸಿದೆ. ದೇಶದಲ್ಲಿರುವ ಶ್ರೀಮಂತ ಸಹಕಾರಿ ಕ್ಷೇತ್ರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಹಕಾರ ಖಾತೆಯನ್ನು ರಚಿಸಿದೆ. ಈ ಮೊದಲು ಹಣಕಾಸು ಸಂಬಂಧಿತ ಸಮಸ್ಯೆಗಳನ್ನು ಹಣಕಾಸು ಸಚಿವರು ನಿರ್ವಹಿಸುತ್ತಿದ್ದರು. ಆದರೆ ಗೃಹ ಸಚಿವರಾಗಿರುವ ಅಮಿತ್ ಶಾ ಜಾರಿ ನಿರ್ದೇಶನಾಲಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅಮಿತ್ ಶಾ ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು EDಯನ್ನು ಬಳಸಿಕೊಳ್ಳುತ್ತಿದ್ದಾರೆ. ಸಹಕಾರ ಇಲಾಖೆಯ ವಿಷಯದಲ್ಲೂ ಇದೇ ಆಗಲಿದೆ ನಾವು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತೇವೆ. ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಮಧ್ಯೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಹಕಾರಿ ಕ್ಷೇತ್ರವನ್ನು ನಿಯಂತ್ರಿಸುವ ಹಕ್ಕನ್ನು ಕೇಂದ್ರ ಹೊಂದಿಲ್ಲ ಸಹಕಾರಿ ವಲಯಗಳ ಮೇಲೆ ನಿಯಂತ್ರಣ ಸಾಧಿಸುವ ಯತ್ನ ಒಕ್ಕೂಟ ವ್ಯವಸ್ಥೆಯ ಮೇಲಿನ ಆಕ್ರಮಣದ ಭಾಗವಾಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ ರಾಜ್ಯಗಳ ಸಂವಿಧಾನದತ್ತವಾದ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಭವಿಷ್ಯದಲ್ಲಿ ಎಲ್ಲವನ್ನೂ ಕೇಂದ್ರದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯಗಳ ಸ್ವಾಯತ್ತತೆಯ ಮೇಲೆ ನಿಯಂತ್ರಣ ಸಾದಿಸಿ ರಾಜ್ಯಗಳ ಆರ್ಥಿಕತೆಯಲ್ಲಿ ಹಸ್ತಕ್ಷೇಪ ಮಾಡಿ ರಾಜ್ಯ ಸರ್ಕಾರಗಳು ಕೇಂದ್ರದ ಮುಂದೆ ಮಂಡಿಯೂರುವಂತೆ ಮಾಡುವುದೇ ಅದರ ಉದ್ದೇಶವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button