Latestಮೆಟ್ರೋ

ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ‘ಸೈಬರ್ ಸುರಕ್ಷಿತ ಕರ್ನಾಟಕ’ ಅಭಿಯಾನಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸೈಬರ್ ಕ್ರೈಂ ತಡೆಗಟ್ಟುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಪೀಳಿಗೆಗೆ ತರಬೇತಿ ನೀಡಲು ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನ ಕೈಗೊಳ್ಳಲಾಗಿದೆ.

ಸೈಬರ್ ಕ್ರೈಂಗೂ ಫಿಸಿಕಲ್ ಕ್ರೈಂಗೂ ವ್ಯತ್ಯಾಸ ಇದೆ. ಸರ್ಕಾರದ ಇಲಾಖೆಗಳಲ್ಲೂ ಸೈಬರ್ ಕ್ರೈಮ್ ಗಳಾಗಿರೋ ಉದಾಹರಣೆಗಳಿವೆ. ನಮ್ಮ ಸುರಕ್ಷತೆಯಷ್ಟೇ ನಮ್ಮ ಡಿಜಿಟಲ್ ಸುರಕ್ಷತೆ ಅತಿ ಮುಖ್ಯ. ಬಹು ಮಂದಿ ಮೊಬೈಲ್ ಸೇರಿದಂತೆ ಡಿಜಿಟಲ್ ಉಪಕರಣಗಳನ್ನು ಬಳಸುತ್ತಾರೆ. ಆದರೆ ಬಹಳಷ್ಟು ಜನ ವಿದ್ಯಾವಂತರಿಗೂ ಸೈಬರ್ ಸುರಕ್ಷತೆ ಬಗ್ಗೆ ಅರಿವು ಇರುವುದಿಲ್ಲ ಎಂದು ಸಿಎಂ ಹೇಳಿದರು.

ಬೆಂಗಳೂರಿನ ಎಫ್ ಎಸ್ ಎಲ್ ಕೇಂದ್ರ ಹೊಸ ಟೆಕ್ನಾಲಜಿಯನ್ನ ಹೊಂದಿದ್ದು, ಸೈಬರ್ ಪ್ರಕರಣಗಳನ್ನು ಪತ್ತೆ ಹಚ್ಚಲು ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಯುವಕರ ಸುರಕ್ಷತೆಗೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಡ್ರಗ್ಸ್‌ಗೆ ಕಡಿವಾಣ ಹಾಕುತ್ತಿದೆ. ಸೈಬರ್ ಮೂಲಕವೇ ನಡೆಯವ ಡಾರ್ಕ್ ವೆಬ್ ಗೂ ಕಡಿವಾಣ ಹಾಕುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ ಎಂದರು.

ಸೈಬರ್ ಪೊಲೀಸ್ ಠಾಣೆಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ.ಸೈಬರ್ ಕ್ರೈಂ ತಡೆಗಟ್ಟುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.

ಸೈಬರ್ ಕ್ರೈಂಗೆ ಸಾಕಷ್ಟು ಬಡ ಕುಟುಂಬಗಳು ನಾಶವಾಗುತ್ತಿವೆ. ಸೈಬರ್ ಕ್ರೈಮ್ ಅನ್ನೋದು ವೈರಸ್ ಇದ್ದಂತೆ, ಅದನ್ನು ಸದೆ ಬಡೆಯಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ದೇಶದಲ್ಲೇ ಪ್ರಥಮವಾಗಿ ಅಭಿಯಾನ ನಡೆಸುತ್ತಿರುವುದಕ್ಕೆ ಸಂತಸವಾಗಿದೆ. ಎನ್‌ಎನ್ಎಸ್ ಸ್ವಯಂ ಸೇವಕರಿಗೆ ತರಬೇತಿ ನೀಡಿ ಅವರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲೂ ತರಬೇತಿಯನ್ನು ನೀಡಿ, ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ ಎಂದರು.

ಮುಂದಿನ ಹಂತದಲ್ಲಿ ಪೊಲೀಸ್ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲೂ ಸೈಬರ್ ಸೇಫ್ ಸಂಬಂಧ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಮಹಿಳೆಯರು, ಯುವ ಜನತೆ ಸೇರಿದಂತೆ ಎಲ್ಲರೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಈ ಅಭಿಯಾನ ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಟ ರಮೇಶ್ ಅರವಿಂದ್, ಬಹುತೇಕರು ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ಬಳಸುವುದರಿಂದ ಅನುಕೂಲವಾಗುವುದರ ಜೊತೆಗೆ ಅನಾನುಕೂಲವೂ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಜಾಗೃತಿ ಮುಖ್ಯವಾಗಿದೆ. ಕೊರೋನಾ ವಿರುದ್ಧ ಹೋರಾಡಿದ ರೀತಿಯಲ್ಲಿ ಸೈಬರ್ ಕ್ರೈಂ ವಿರುದ್ದವೂ ಒಗ್ಗಟ್ಟಿನ ಹೋರಾಟ ಇರಬೇಕಾಗುತ್ತದೆ. ಸ್ಯಾನಿಟೈಸರ್, ಮಾಸ್ಕ್ ಬಳಸಿ ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿದಂತೆಯೇ ಇಂಟರ್ನೆಟ್ ಬಳಸುವ ಸಂದರ್ಭದಲ್ಲಿ ಸೈಬರ್ ಕ್ರೈಂಗೆ ಅವಕಾಶ ಸಿಗದಂತೆ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button