
ಬೆಂಗಳೂರು : ನಮ್ಮ ಸರ್ಕಾರ ಅರಿವು ಹಾಗೂ ಅಂತಃಕರಣದ ಸರ್ಕಾರ. ಜನರಿಗಾಗಿ, ಜನರಿಗೋಸ್ಕರ, ಜನ ಕಲ್ಯಾಣಕ್ಕಾಗಿ ಇರುವ ಸರ್ಕಾರವಾಗಿದ್ದು, ಜನರ ಬೆಂಗಾವಲಾಗಿ ರಾಜ್ಯ ಸರ್ಕಾರ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದು ಇಂದಿಗೆ 6 ತಿಂಗಳು ಪೂರೈಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಕುರಿತು ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.
ಬಳಿಕ ಮಾತನಾಡಿದ ಅವರು ಸರ್ಕಾರಕ್ಕಾಗಲಿ, ಯಾವುದೇ ವ್ಯಕ್ತಿಗಾಗಲಿ ಅರಿವು ಮುಖ್ಯ. ಅರಿವೇ ಗುರು ಎಂಬ ಮಾತಿದೆ. ಹಾಗಾಗಿ ಜನರ ಸಂಕಷ್ಟ, ನೋವು-ನಲಿವಿನ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಜನರಿಗಾಗಿ ಜನರಿಗೋಸ್ಕರ ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ದುಡಿಯುತ್ತದೆ. ನಾವು ತೆಗೆದುಕೊಳ್ಳುವ ಪ್ರತಿ ನಿರ್ಣಯ ಸಾರ್ವತ್ರಿಕ ಹಿತವೇ ಅದರ ಕೇಂದ್ರ ಬಿಂದು. ಕಳೆದ 6 ತಿಂಗಳ ನನ್ನ ಅವಧಿಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ನಾವು ಅವಕಾಶ ಕೊಟ್ಟಿಲ್ಲ ಎಂದರು.
ರಾಜ್ಯದಲ್ಲಿ 10 ಕೃಷಿ ವಲಯಗಳಿವೆ. 365 ದಿನ ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಾಗುತ್ತದೆ. ಇಂತಹ ಭಾಗ್ಯ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಕರ್ನಾಟಕದಲ್ಲಿ ಸಂಪದ್ಭರಿತ ಅರಣ್ಯವಿದೆ. ಖನಿಜ ಸಂಪನ್ಮೂಲವಿದೆ. ಗಂಗರು, ಚೋಳರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದ ಅರಸರು, ಮೈಸೂರು ಅರಸರು ಕರ್ನಾಟಕ್ಕೆ ಅದ್ಭುತವಾದ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ, ಆಳ್ವಿಕೆಯೇ ಬೇರೆ ಆಡಳಿತ ನಡೆಸುವುದೇ ಬೇರೆ ಎಂದು 11ನೇ ಶತಮಾನದಲ್ಲೇ ಮಹನಿಯರು ಹೇಳಿದ್ದಾರೆ ಎಂದು ಹೇಳಿದರು.
